ಹಾಸನ: ಲಾಡ್ಜ್ನಲ್ಲಿ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ವಳಲಹಳ್ಳಿ ಕೂಡಿಗೆಯಲ್ಲಿ ನಡೆದಿದೆ.
ಮೃತ ಯುವತಿಯನ್ನು ಬೆಂಗಳೂರಿನ ನಾಗಸಂದ್ರ ನಿವಾಸಿ ವರ್ಷ (23) ಎಂದು ಗುರುತಿಸಲಾಗಿದೆ. ವರ್ಷ ತನ್ನ ಪ್ರಿಯಕರ ರಘು ಹಾಗೂ ಸ್ನೇಹಿತ ದರ್ಶನ್ ಜೊತೆ ಶುಕ್ರವಾರ ಟ್ರಿಪ್ಗೆಂದು ಸಕಲೇಶಪುರಕ್ಕೆ ಬಂದಿದ್ದಳು.
ಮೂವರು ಶನಿವಾರ, ಭಾನುವಾರ ಹಾಗೂ ಸೋಮವಾರ ಬೆಟ್ಟದ ಭೈರವೇಶ್ವರ, ಮಜಗಹಳ್ಳಿ ಫಾಲ್ಸ್ ಸೇರಿದಂತೆ ಸಕಲೇಶಪುರದ ಹಲವು ಪ್ರವಾಸಿ ತಾಣಗಳಿಗೆ ತೆರಳಿ ಸುತ್ತಾಡಿದ್ದರು. ಬಳಿಕ ವಳಲಹಳ್ಳಿ ಕೂಡಿಗೆಯಲ್ಲಿರುವ ಲಾಡ್ಜ್ನಲ್ಲಿ ಒಂದೇ ಕೊಠಡಿಯಲ್ಲಿ ತಂಗಿದ್ದರು.
ಮಂಗಳವಾರ ಲಾಡ್ಜ್ನಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ವರ್ಷ ಅಸ್ವಸ್ಥಗೊಂಡು ಮೃತಪಟ್ಟಿದ್ದಾಳೆ. ಕೂಡಲೇ ರಘು ಹಾಗೂ ದರ್ಶನ್ ಯುವತಿಯನ್ನು ಸಕಲೇಶಪುರ ತಾಲೂಕು ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಪರೀಕ್ಷಿಸಿದ ವೈದ್ಯರು ಯುವತಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಯುವತಿ ಸಾವನ್ನಪ್ಪಿರುವ ಕುರಿತು ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.
ಘಟನೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.



