ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ, ಕಮಲ್ ಹಾಸನ್ ನಿರ್ಮಾಣದ ಬಹುನಿರೀಕ್ಷಿತ ‘ಧರ್ಮನ್’ ಸಿನಿಮಾ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ದಿನದಿಂದ ದಿನಕ್ಕೆ ಚಿತ್ರದ ತಾರಾಗಣ ಮತ್ತಷ್ಟು ಬಲಿಷ್ಠವಾಗುತ್ತಿದ್ದು, ಇದೀಗ ಸ್ಯಾಂಡಲ್ವುಡ್ ಬೆಡಗಿ ಶ್ರೀಲೀಲಾ ಕೂಡ ಚಿತ್ರತಂಡ ಸೇರಿಕೊಂಡಿದ್ದಾರೆ. ಪ್ರಮುಖ ಪಾತ್ರವೊಂದರಲ್ಲಿ ಅವರು ಕಾಣಿಸಿಕೊಳ್ಳಲಿದ್ದು, ಈ ಅಧಿಕೃತ ಘೋಷಣೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.
‘ರಾಜ್ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್’ ಮತ್ತು ‘ಟರ್ಮರಿಕ್ ಮೀಡಿಯಾ’ ಸಂಸ್ಥೆಗಳ ಮೂಲಕ ಕಮಲ್ ಹಾಸನ್ ಹಾಗೂ ಆರ್. ಮಹೇಂದ್ರನ್ ಈ ಬಿಗ್ ಬಜೆಟ್ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ‘ಓ ಮೈ ಕಡವುಳೆ’ ಸಿನಿಮಾ ಖ್ಯಾತಿಯ ಅಶ್ವತ್ಥ್ ಮಾರಿಮುತ್ತು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ವಿಭಿನ್ನ ಕಥಾಹಂದರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ.
ಇನ್ನು ತಾಂತ್ರಿಕ ವಿಭಾಗದಲ್ಲೂ ‘ಧರ್ಮನ್’ ಸಿನಿಮಾ ಸಾಕಷ್ಟು ಬಲಿಷ್ಠವಾಗಿದೆ. ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸುತ್ತಿದ್ದು, ಸಾಹಸ ದೃಶ್ಯಗಳ ಹೊಣೆಯನ್ನು ಜನಪ್ರಿಯ ಅನ್ಬರಿವ್ ಜೋಡಿ ನಿರ್ವಹಿಸುತ್ತಿದೆ. ಹೀಗಾಗಿ ಅದ್ದೂರಿ ಮೇಕಿಂಗ್ ಹಾಗೂ ಬಲಿಷ್ಠ ತಾರಾಗಣದ ಮೂಲಕ ಸಿನಿಮಾ ಗಮನ ಸೆಳೆಯುವ ನಿರೀಕ್ಷೆಯಿದೆ.
ಈಗಾಗಲೇ ನಟಿ ನಯನತಾರಾ ಕೂಡ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಮೂರನೇ ಹಂತದ ಚಿತ್ರೀಕರಣವನ್ನು ಸೆಪ್ಟೆಂಬರ್ನಲ್ಲಿ ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಕೊನೆಯ ಹಂತದ ಪ್ರಮುಖ ದೃಶ್ಯಗಳ ಚಿತ್ರೀಕರಣಕ್ಕೆ ಸಿದ್ಧವಾಗುತ್ತಿದೆ ಎನ್ನಲಾಗಿದೆ. ನಯನತಾರಾ ಬೆನ್ನಲ್ಲೇ ಶ್ರೀಲೀಲಾ ಎಂಟ್ರಿ ಕೊಟ್ಟಿರುವುದು ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಇನ್ನು ಶ್ರೀಲೀಲಾ ಪಾಲಿಗೂ ‘ಧರ್ಮನ್’ ಮಹತ್ವದ ಸಿನಿಮಾವಾಗುವ ಸಾಧ್ಯತೆಯಿದೆ. ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ‘ಪರಾಶಕ್ತಿ’ ಚಿತ್ರದ ಮೂಲಕ ಅವರು ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಶಿವಕಾರ್ತಿಕೇಯನ್, ರವಿ ಮೋಹನ್ ಹಾಗೂ ಅಥರ್ವ ಜೊತೆ ತೆರೆ ಹಂಚಿಕೊಂಡಿದ್ದ ಶ್ರೀಲೀಲಾ, ಇದೀಗ ತಮಿಳಿನಲ್ಲಿ ಮತ್ತಷ್ಟು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ.










