ಬೆಂಗಳೂರು: ವ್ಹೀಲಿಂಗ್ ಮಾಡುತ್ತಿದ್ದವರಿಂದ ತಪ್ಪಿಸಿಕೊಳ್ಳಲು ಹೋಗಿ ಟಿಟಿ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ.
ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಮಹದೇಶ್ವರ ದೇವಸ್ಥಾನದ ಬಳಿ ಘಟನೆ ನಡೆದಿದೆ.
ನಿನ್ನೆ ಮಧ್ಯರಾತ್ರಿ ದೇವಸ್ಥಾನದ ಬಳಿಯ ರಿಂಗ್ ರಸ್ತೆಯಲ್ಲಿ ಕೆಲವರು ವ್ಹೀಲಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ವ್ಹೀಲಿಂಗ್ ಮಾಡುತ್ತಿದ್ದವರಿಂದ ತಪ್ಪಿಸಲು ಚಾಲಕ ಪ್ರಯತ್ನಿಸಿದಾಗ ಟಿಟಿ ವಾಹನ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಚಾಲಕ ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರನ್ನು ಮನೋಜ್ ಎಂದು ಗುರುತಿಸಲಾಗಿದೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



