ಮಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಇಬ್ಬರು ಮಕ್ಕಳನ್ನು ಬಾವಿಗೆ ಎಸೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ನೆಯಲ್ಲಿ ನಡೆದಿದೆ.
ನೂರುನ್ನೀಸಾ (28) ಹಾಗೂ ಅವರ ಪತಿ ಸಿನಾನ್ (32) ನಡುವೆ ಇಂದು ಫೋನ್ನಲ್ಲಿ ಜಗಳ ನಡೆದಿತ್ತು ಎನ್ನಲಾಗಿದೆ. ಈ ವೇಳೆ ಕೋಪಗೊಂಡ ನೂರುನ್ನೀಸಾ, ಪತಿಯ ತಂಗಿಯ ಮಗುವಿನ ಜೊತೆಗೆ ತನ್ನ ಮಗುವನ್ನೂ ಬಾವಿಗೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ಗಮನಿಸಿದ ಸ್ಥಳೀಯರು ತಕ್ಷಣ ಬಾವಿಗೆ ಇಳಿದು ಇಬ್ಬರು ಮಕ್ಕಳನ್ನು ಮೇಲಕ್ಕೆತ್ತಿದ್ದಾರೆ. ಆದರೆ ಪತಿಯ ತಂಗಿಯ ಮಗು ಮೃತಪಟ್ಟಿದ್ದು, ನೂರುನ್ನೀಸಾ ಅವರ ಸುಮಾರು ಮೂರೂವರೆ ವರ್ಷದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸರು ನೂರುನ್ನೀಸಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.



