ಆನೇಕಲ್: ರಾತ್ರಿ ಸುರಿದ ಭಾರೀ ಮಳೆಯಿಂದ ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಹಳೆ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಮಳೆ ನೀರು ರಸ್ತೆಯಲ್ಲಿ ನಿಂತಿದ್ದು, ಕೆಸರು ಉಂಟಾಗಿ ವಾಹನ ಸವಾರರು ಪರದಾಡುವಂತಾಗಿದೆ.
ಹಳೆ ಚಂದಾಪುರದ ಬಳಿ ಕಳೆದ ಒಂದು ವರ್ಷದಿಂದ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಂಡಿಲ್ಲದ ಹಿನ್ನೆಲೆಯಲ್ಲಿ ಮಳೆ ನೀರು ರಸ್ತೆಯಲ್ಲೇ ನಿಂತು, ಸಂಚಾರಕ್ಕೆ ಅಡ್ಡಿಯಾಗಿದೆ. ಪರಿಣಾಮ ಹೆದ್ದಾರಿಯಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಸೂರ್ಯನಗರ ಪೊಲೀಸರು ಸ್ಥಳದಲ್ಲಿ ಸಂಚಾರ ನಿರ್ವಹಣೆ ಮಾಡಿದ್ದಾರೆ.
ಪ್ರತಿದಿನ ಕಾಮಗಾರಿ ಹಾಗೂ ಟ್ರಾಫಿಕ್ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿರುವ ವಾಹನ ಸವಾರರು, ಹೆದ್ದಾರಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.



