ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 108 ಅಂಬುಲೆನ್ಸ್ ಸೇವೆಗೆ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ 108 ಅಂಬುಲೆನ್ಸ್ ನೌಕರರು ನೀಡಿದ್ದ 15 ದಿನಗಳ ಗಡುವು ಮುಕ್ತಾಯಗೊಂಡಿದ್ದು, ಇಂದು ಜಿವಿಕೆ ಸಂಸ್ಥೆಯೊಂದಿಗೆ ಮಹತ್ವದ ಸಭೆ ನಡೆಯಲಿದೆ.
ಬೇಡಿಕೆಗಳು ಈಡೇರದಿದ್ದರೆ ಇಂದು ರಾತ್ರಿ 108 ಅಂಬುಲೆನ್ಸ್ ಸೇವೆ ಸ್ಥಗಿತಗೊಳಿಸಿ ಹೋರಾಟ ತೀವ್ರಗೊಳಿಸಲು ನೌಕರರು ನಿರ್ಧರಿಸಿದ್ದಾರೆ. ಸಾಮೂಹಿಕ ರಾಜೀನಾಮೆ ನೀಡುವ ಬಗ್ಗೆಯೂ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ರಾಜ್ಯಾದ್ಯಂತ 108 ಅಂಬುಲೆನ್ಸ್ ಸೇವೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.
108 ನೌಕರರ ಪ್ರಮುಖ ಬೇಡಿಕೆಗಳು:
- ಪ್ರತಿ ವರ್ಷ ವಾರ್ಷಿಕ ವೇತನ ಹೆಚ್ಚಳದೊಂದಿಗೆ ವೇತನ ಪರಿಷ್ಕರಣೆ
- ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಅಗತ್ಯ ವಾಹನಗಳ ವ್ಯವಸ್ಥೆ
- ವಲಯವಾರು ವೇತನ ನಿಗದಿ ವ್ಯವಸ್ಥೆ ರದ್ದುಪಡಿಸಿ ಏಕರೂಪ ವೇತನ ಜಾರಿ
- ಜೇಷ್ಠತೆ ಆಧಾರದ ಮೇಲೆ ಸಿಬ್ಬಂದಿಗೆ ವೇತನ ನಿಗದಿ
- ಕಾರ್ಮಿಕ ಇಲಾಖೆ ನಿಯಮದಂತೆ ಪ್ರತಿ ತಿಂಗಳ 7ರೊಳಗೆ ವೇತನ ಪಾವತಿ
- ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಯ ಕುಟುಂಬಕ್ಕೆ ₹50 ಲಕ್ಷ ಪರಿಹಾರ
- ಸಿಬ್ಬಂದಿಗೆ ಸೂಕ್ತ ವಿಶ್ರಾಂತಿ ಕೊಠಡಿಗಳ ವ್ಯವಸ್ಥೆ
- ಶಿಫ್ಟ್ ಸಮಯದಲ್ಲಿ ಬದಲಾವಣೆ
- ಒಟ್ಟಾರೆ, 108 ಅಂಬುಲೆನ್ಸ್ ನೌಕರರ ಬೇಡಿಕೆಗಳ ಕುರಿತು ಇಂದು ನಡೆಯಲಿರುವ ಸಭೆ ಮಹತ್ವ ಪಡೆದಿದ್ದು, ಬೇಡಿಕೆಗಳು ಈಡೇರದಿದ್ದರೆ ರಾತ್ರಿ ವೇಳೆಯಿಂದಲೇ ಸೇವೆ ಸ್ಥಗಿತಗೊಳಿಸುವ ಎಚ್ಚರಿಕೆಯನ್ನು ನೌಕರರು ನೀಡಿದ್ದಾರೆ. ಸರ್ಕಾರ ಹಾಗೂ ಜಿವಿಕೆ ಸಂಸ್ಥೆ ಈ ಸಮಸ್ಯೆಗೆ ಯಾವ ರೀತಿಯ ಪರಿಹಾರ ಕಂಡುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.



