ಚಿಕ್ಕಮಗಳೂರು: ಅಡಿಕೆ ಸುಲಿಯಲು ತೋಟಕ್ಕೆ ತೆರಳಿದ್ದ ಇಬ್ಬರು ಕಾರ್ಮಿಕರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಅಮೃತಾಪುರ ಗ್ರಾಮದಲ್ಲಿ ನಡೆದಿದೆ. ಅಡಿಕೆ ತೋಟದ ಮನೆಯ ನೀರಿನ ತೊಟ್ಟಿಯಲ್ಲಿ ಇಬ್ಬರು ಕಾರ್ಮಿಕರ ಮೃತದೇಹಗಳು ಪತ್ತೆಯಾಗಿದ್ದು,

ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆಕಸ್ಮಿಕವಾಗಿ ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿದ್ದಾರಾ ಅಥವಾ ಸಾವಿನ ಹಿಂದೆ ಬೇರೆ ಕಾರಣವಿದೆಯೇ ಎಂಬ ಅನುಮಾನ ವ್ಯಕ್ತವಾಗಿದ್ದು, ತರೀಕೆರೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮೃತರನ್ನು ಆನಂದ್ (48) ಹಾಗೂ ಜುಂಜಾನಾಯ್ಕ್ (65) ಎಂದು ಗುರುತಿಸಲಾಗಿದೆ. ಇಬ್ಬರೂ ಇಂದು ಬೆಳಗ್ಗೆ ಅಡಿಕೆ ಸುಲಿಯುವ ಕೆಲಸಕ್ಕಾಗಿ ಅಮೃತಾಪುರ ಗ್ರಾಮದ ಮುರುಗೇಶ್ ಎಂಬವರಿಗೆ ಸೇರಿದ ಅಡಿಕೆ ತೋಟಕ್ಕೆ ತೆರಳಿದ್ದರು. ಆದರೆ ತೋಟಕ್ಕೆ ಹೋದ ಕೆಲವೇ ಸಮಯದಲ್ಲಿ ಇಬ್ಬರೂ ನೀರಿನ ತೊಟ್ಟಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಅಡಿಕೆ ಸುಲಿಯಲು ತೆರಳಿದ್ದ ಇಬ್ಬರು ಕಾರ್ಮಿಕರು ನೀರಿನ ತೊಟ್ಟಿಯಲ್ಲಿ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೆಲಸಕ್ಕೆ ತೆರಳಿದ್ದ ಕಾರ್ಮಿಕರು ಆಕಸ್ಮಿಕವಾಗಿ ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿದ್ದಾರಾ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಎಂಬುದು ಸ್ಪಷ್ಟವಾಗಿಲ್ಲ. ಮತ್ತೊಂದೆಡೆ, ಇವರ ಸಾವಿನ ಹಿಂದೆ ಕೊಲೆಯಂತಹ ಕೃತ್ಯ ನಡೆದಿದೆಯೇ ಎಂಬ ಪ್ರಶ್ನೆಯೂ ಎದುರಾಗಿದೆ.
ಘಟನೆಯ ಬಳಿಕ ಆನಂದ್ ಹಾಗೂ ಜುಂಜಾನಾಯ್ಕ್ ಅವರ ಮೃತದೇಹಗಳನ್ನು ತರೀಕೆರೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಇಬ್ಬರ ಸಾವಿಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತರೀಕೆರೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








