ಬೆಂಗಳೂರು: ರಾಜ್ಯ ಸರ್ಕಾರ ಒಂದು ಕಡೆ ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದರೆ, ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಇದರಿಂದ ಸಾಮಾನ್ಯ ಜನರು ಜೀವನ ನಡೆಸುವುದೇ ಕಷ್ಟವಾಗುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ತುಪ್ಪ, ಅಕ್ಕಿ, ಹಾಲು ಹಾಗೂ ಬಸ್ ಟಿಕೆಟ್ ದರ ಏರಿಕೆಯನ್ನು ಪ್ರಸ್ತಾಪಿಸಿರುವ ನ್ಯಾಯಪೀಠ, ಯೋಜನೆಗಳು ಉಚಿತವಾಗಿದ್ದರೂ ಬೆಲೆ ಏರಿಕೆ ಮಾತ್ರ ಖಚಿತವಾಗಿದೆ ಎಂದು ವ್ಯಂಗ್ಯವಾಡಿದೆ.

ಅರ್ಜಿಯೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ಶ್ರೀಶಾನಂದ ಅವರಿದ್ದ ಪೀಠ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ. ಸರ್ಕಾರ ಜನರಿಗೆ ಉಚಿತ ಯೋಜನೆಗಳನ್ನು ನೀಡುತ್ತಿದೆ. ಆದರೆ ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಲೇ ಇದೆ. ಸರ್ಕಾರದ ಎಲ್ಲ ಯೋಜನೆಗಳೂ ಹೀಗೆಯೇ ಇವೆಯೇ ಎಂದು ನ್ಯಾಯಪೀಠ ಪ್ರಶ್ನಿಸಿದೆ.
ತುಪ್ಪದ ಬೆಲೆ ಏರಿಕೆಯ ಉದಾಹರಣೆ ನೀಡಿದ ನ್ಯಾಯಪೀಠ, ಕಳೆದ ತಿಂಗಳು ಒಂದು ಕೆ.ಜಿ. ತುಪ್ಪದ ಬೆಲೆ 650 ರೂಪಾಯಿ ಇತ್ತು. ಆದರೆ ಈಗ ಅದೇ ತುಪ್ಪದ ಬೆಲೆ 850 ರೂಪಾಯಿಗೆ ಏರಿಕೆಯಾಗಿದೆ. ದೀಪಾವಳಿ ಸಂದರ್ಭದಲ್ಲಿ ತುಪ್ಪದಿಂದ ಯಮದೀಪ ಹಚ್ಚುವ ಸಂಪ್ರದಾಯವಿದೆ. ಆದರೆ ತುಪ್ಪದ ಬೆಲೆಯೇ ಇಷ್ಟೊಂದು ಹೆಚ್ಚಾದರೆ ಜನರು ಯಮದೀಪ ಹಚ್ಚುವುದಾದರೂ ಹೇಗೆ ಎಂದು ಪ್ರಶ್ನಿಸಿದೆ.
ಇದೇ ವೇಳೆ ಬೆಲೆ ಏರಿಕೆ ಕುರಿತು ಹಾಸ್ಯಮಿಶ್ರಿತವಾಗಿ ಪ್ರತಿಕ್ರಿಯಿಸಿದ ನ್ಯಾಯಪೀಠ, ಯಮದೀಪ ಹಚ್ಚುವ ಬದಲು ನನ್ನನ್ನೇ ಕರೆದುಕೊಂಡು ಹೋಗು ಎಂದು ಯಮನಿಗೆ ಹೇಳಬೇಕಾದ ಪರಿಸ್ಥಿತಿ ಬಂದಿದೆ. ಅಗತ್ಯ ವಸ್ತುಗಳ ಬೆಲೆ ಇದೇ ರೀತಿ ಏರಿಕೆಯಾಗುತ್ತಾ ಹೋದರೆ ಮನುಷ್ಯ ಎಲ್ಲಿಗೆ ಹೋಗಬೇಕು? ಸಾಮಾನ್ಯ ಜನರು ಜೀವನ ಸಾಗಿಸುವುದಾದರೂ ಹೇಗೆ ಎಂದು ಕಳವಳ ವ್ಯಕ್ತಪಡಿಸಿದೆ.
ಅಕ್ಕಿಯ ಬೆಲೆ ಏರಿಕೆಯನ್ನೂ ಪ್ರಸ್ತಾಪಿಸಿರುವ ನ್ಯಾಯಪೀಠ, ಒಂದು ಕೆ.ಜಿ. ಅಕ್ಕಿಯ ಬೆಲೆ 103 ರೂಪಾಯಿಗೆ ತಲುಪಿದೆ ಎಂಬ ವಿಚಾರವನ್ನು ಗಮನಕ್ಕೆ ತಂದಿದೆ. ದಿನನಿತ್ಯದ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗುತ್ತಿರುವುದರಿಂದ ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಹೆಚ್ಚುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದೆ.
ಇದರ ಜೊತೆಗೆ ಹಾಲಿನ ದರ ಹಾಗೂ ಬಸ್ ಟಿಕೆಟ್ ದರ ಹೆಚ್ಚಳದ ಬಗ್ಗೆಯೂ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಒಂದು ಕಡೆ ಸರ್ಕಾರ ಉಚಿತ ಯೋಜನೆಗಳನ್ನು ನೀಡುತ್ತಿದ್ದರೆ, ಮತ್ತೊಂದೆಡೆ ಹಾಲು, ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ. ದಿನಸಿ ಖರೀದಿಸಲು ಹೊರಗೆ ಹೋಗುವ ಜನರು ಬಸ್ ಪ್ರಯಾಣಕ್ಕೂ ಹೆಚ್ಚುವರಿ ಹಣ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಇನ್ನು ಕಬ್ಬಿನ ಬೆಲೆ ಹಾಗೂ ಸಕ್ಕರೆ ದರದ ವಿಚಾರವನ್ನೂ ನ್ಯಾಯಪೀಠ ಪ್ರಸ್ತಾಪಿಸಿದೆ. ಸರ್ಕಾರ ಪ್ರತಿ ಟನ್ ಕಬ್ಬಿಗೆ 3,600 ರೂಪಾಯಿ ಬೆಲೆ ಘೋಷಿಸಿದೆ. ಆದರೆ ದೀಪಾವಳಿ ಹಬ್ಬ ಮುಗಿದ ನಂತರ ಒಂದು ಕೆ.ಜಿ. ಸಕ್ಕರೆಯ ಬೆಲೆ 90 ರೂಪಾಯಿಗೆ ಏರಿಕೆಯಾಗಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದೆ.









