ಮಂಡ್ಯ: ಲೇಡಿ ಪಿಎಸ್‌ಐಗೆ ಕಪಾಳಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯಗೌಡ ಅವರು ಪಿಎಸ್‌ಐ ಸವಿತಾ ಪಾಟೀಲ್ ಅವರಿಗೆ ವೀಡಿಯೋ ಮೂಲಕ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಉಕ್ಕಡಮ್ಮ ದೇವಾಲಯಕ್ಕೆ ಐಶ್ವರ್ಯಗೌಡ ಅವರು ತೆರಳಿದ್ದ ವೇಳೆ ಗರ್ಭಗುಡಿಗೆ ತೆರಳಿ ದೇವರ ದರ್ಶನ ಪಡೆಯುವ ವಿಚಾರದಲ್ಲಿ ಗಲಾಟೆ ನಡೆದಿತ್ತು. ದೇವಾಲಯದ ಭದ್ರತೆಗೆ ನಿಯೋಜನೆಗೊಂಡಿದ್ದ ಪಿಎಸ್‌ಐ ಸವಿತಾ ಪಾಟೀಲ್ ಅವರೊಂದಿಗೆ ಐಶ್ವರ್ಯಗೌಡ ವಾಗ್ವಾದ ನಡೆಸಿದ್ದರು. ಈ ವೇಳೆ ಪಿಎಸ್‌ಐಗೆ ಕಪಾಳಮೋಕ್ಷ ಮಾಡಿರುವ ಆರೋಪ ಕೇಳಿಬಂದಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ನ್ಯಾಯಾಲಯದ ಸೂಚನೆಯ ಹಿನ್ನೆಲೆಯಲ್ಲಿ ಐಶ್ವರ್ಯಗೌಡ ಅವರು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
ವೀಡಿಯೋ ಮೂಲಕ ಮಾತನಾಡಿರುವ ಐಶ್ವರ್ಯಗೌಡ, “ಆಗಸ್ಟ್ 12ರಂದು ಭೀಮನ ಅಮಾವಾಸ್ಯೆಯಂದು ನಾನು ಮತ್ತು ನನ್ನ ಇಬ್ಬರು ಮಕ್ಕಳು ಪಾಂಡವಪುರದ ಉಕ್ಕಡಮ್ಮ ದೇವಸ್ಥಾನಕ್ಕೆ ತೆರಳಿದ್ದೆವು. ಅಂದು ದೇವಾಲಯದಲ್ಲಿ ಹೆಚ್ಚಿನ ಜನಸಂದಣಿ ಇತ್ತು. ನನ್ನ ಮಕ್ಕಳಿಗೆ ‘ಅಮ್ಮ’ ಆಗಿದ್ದ ಕಾರಣ ದೇವರ ದರ್ಶನ ಪಡೆಯುವ ಸಂದರ್ಭದಲ್ಲಿ ನನ್ನ ಮತ್ತು ಮಹಿಳಾ ಪಿಎಸ್‌ಐ ನಡುವೆ ಸಣ್ಣ ಮಾತಿನ ಚಕಮಕಿ ನಡೆಯಿತು. ಉದ್ವೇಗದಿಂದ ಅಹಿತಕರ ಘಟನೆ ನಡೆದಿದೆ” ಎಂದು ಹೇಳಿದ್ದಾರೆ.
“ಈ ಘಟನೆ ನಡೆಯಬಾರದಿತ್ತು. ನಡೆದಿರುವ ಘಟನೆ ಬಗ್ಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಈ ಘಟನೆಯಿಂದ ಕರ್ತವ್ಯದಲ್ಲಿದ್ದ ಪಿಎಸ್‌ಐ ಸವಿತಾ ಪಾಟೀಲ್ ಅವರಿಗೆ ನೋವಾಗಿದ್ದರೆ, ನಾನು ಬೇಷರತ್ ಕ್ಷಮೆಯಾಚಿಸುತ್ತೇನೆ” ಎಂದು ಐಶ್ವರ್ಯಗೌಡ ತಿಳಿಸಿದ್ದಾರೆ.
ಈ ಮೂಲಕ ಪಿಎಸ್‌ಐ ಸವಿತಾ ಪಾಟೀಲ್ ಅವರೊಂದಿಗೆ ನಡೆದಿದ್ದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಶ್ವರ್ಯಗೌಡ ಅವರು ಸಾರ್ವಜನಿಕವಾಗಿ ಕ್ಷಮೆ ಕೋರಿದ್ದಾರೆ.



