HomeSports News15 ವರ್ಷದ ವೈಭವ್ ಸೂರ್ಯವಂಶಿಯಲ್ಲಿರುವ ಆ ‘ಒಂದು’ ಸ್ಕಿಲ್ʼಗೆ ಸೂರ್ಯಕುಮಾರ್ ಫಿದಾ!

15 ವರ್ಷದ ವೈಭವ್ ಸೂರ್ಯವಂಶಿಯಲ್ಲಿರುವ ಆ ‘ಒಂದು’ ಸ್ಕಿಲ್ʼಗೆ ಸೂರ್ಯಕುಮಾರ್ ಫಿದಾ!

For Dai;y Updates Join Our whatsapp Group

ಟೀಂ ಇಂಡಿಯಾದ 360 ಡಿಗ್ರಿ ಬ್ಯಾಟರ್ ಎಂದೇ ಖ್ಯಾತಿ ಪಡೆದಿರುವ ಸೂರ್ಯಕುಮಾರ್ ಯಾದವ್, ಯುವ ಆಟಗಾರ ವೈಭವ್ ಸೂರ್ಯವಂಶಿಯ ಸಿಕ್ಸರ್ ಹೊಡೆಯುವ ಸಾಮರ್ಥ್ಯಕ್ಕೆ ಮಾರುಹೋಗಿದ್ದಾರೆ. ತಮ್ಮದೇ ಆದ ವಿಭಿನ್ನ ಶಾಟ್‌ಗಳ ಮೂಲಕ ಟಿ20 ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು ಮಾಡಿರುವ ಸೂರ್ಯಕುಮಾರ್, ಇದೀಗ ವೈಭವ್ ಅವರಲ್ಲಿರುವ ಒಂದು ವಿಶೇಷ ಕೌಶಲ್ಯವನ್ನು ತಾವು ಕೂಡ ಪಡೆದುಕೊಳ್ಳಲು ಬಯಸುವುದಾಗಿ ಹೇಳಿದ್ದಾರೆ.

ಇತ್ತೀಚೆಗೆ ಸೂರ್ಯಕುಮಾರ್ ಯಾದವ್ ಅವರು ‘ಹ್ಯೂಮನ್ಸ್ ಆಫ್ ಬಾಂಬೆ’ ಯೂಟ್ಯೂಬ್ ಚಾನೆಲ್‌ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ, ‘ಯಾವ ಆಟಗಾರನ ಸ್ಕಿಲ್‌ ಅನ್ನು ನೀವು ಪಡೆದುಕೊಳ್ಳಲು ಬಯಸುತ್ತೀರಿ?’ ಎಂಬ ಪ್ರಶ್ನೆಯನ್ನು ಅವರಿಗೆ ಕೇಳಲಾಗಿತ್ತು.

ಇದಕ್ಕೆ ಉತ್ತರಿಸಿದ ಸೂರ್ಯಕುಮಾರ್, “ನಿಮ್ಮ ಗಮನಕ್ಕೂ ಬಂದಿರಬಹುದು, ವೈಭವ್ ಸೂರ್ಯವಂಶಿ ಎಂಬ ಯುವ ಆಟಗಾರನಿದ್ದಾನೆ. ಆತ ಎಷ್ಟು ಸುಲಭವಾಗಿ ಮತ್ತು ಭರ್ಜರಿಯಾಗಿ ಸಿಕ್ಸರ್‌ಗಳನ್ನು ಬಾರಿಸುತ್ತಾನೆ. ಆತನ ಸಿಕ್ಸರ್ ಹೊಡೆಯುವ ಕೌಶಲ್ಯವನ್ನು ನಾನು ಪಡೆದುಕೊಳ್ಳಲು ಬಯಸುತ್ತೇನೆ” ಎಂದು ಹೇಳಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ 9,000ಕ್ಕೂ ಹೆಚ್ಚು ರನ್ ಗಳಿಸಿರುವ ಸೂರ್ಯಕುಮಾರ್ ಯಾದವ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿಸುವ ಸಾಮರ್ಥ್ಯ ಹೊಂದಿದ್ದಾರೆ. ಇಂತಹ 360 ಡಿಗ್ರಿ ಬ್ಯಾಟರ್ ಸ್ವತಃ ವೈಭವ್ ಸೂರ್ಯವಂಶಿಯ ಸಿಕ್ಸರ್ ಹೊಡೆಯುವ ಕೌಶಲ್ಯವನ್ನು ಮೆಚ್ಚಿಕೊಂಡಿರುವುದು ಯುವ ಆಟಗಾರನ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಮತ್ತಷ್ಟು ಮೆಚ್ಚುಗೆ ತಂದಿದೆ.

2025ರ ಐಪಿಎಲ್‌ನಲ್ಲಿ ಪದಾರ್ಪಣೆ ಮಾಡಿದ್ದ ವೈಭವ್ ಸೂರ್ಯವಂಶಿ, 2026ರ ಐಪಿಎಲ್‌ನಲ್ಲಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯದಿಂದ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ಈ ಸೀಸನ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ವೈಭವ್, 776 ರನ್‌ಗಳನ್ನು ಕಲೆಹಾಕಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ, ಒಂದೇ ಐಪಿಎಲ್ ಋತುವಿನಲ್ಲಿ ಬರೋಬ್ಬರಿ 72 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಅವರ ಸಿಕ್ಸರ್‌ ಹೊಡೆಯುವ ಸಾಮರ್ಥ್ಯವೇ ಇದೀಗ ಸೂರ್ಯಕುಮಾರ್ ಯಾದವ್ ಅವರ ಗಮನ ಸೆಳೆದಿದೆ.

ಇದೇ ವೇಳೆ, ತಮ್ಮ ಕ್ರಿಕೆಟ್ ಜೀವನದಲ್ಲಿ ಎದುರಿಸಿದ ಅತ್ಯಂತ ಕಠಿಣ ಬೌಲರ್ ಯಾರು ಎಂಬ ಪ್ರಶ್ನೆಗೂ ಸೂರ್ಯಕುಮಾರ್ ಯಾದವ್ ಉತ್ತರಿಸಿದ್ದಾರೆ. ಟೀಂ ಇಂಡಿಯಾ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಸಹ ಆಟಗಾರ ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ಎದುರಿಸುವುದು ಅತ್ಯಂತ ಕಷ್ಟ ಎಂದು ಹೇಳಿದ್ದಾರೆ. “ಬುಮ್ರಾ ಪ್ರಸ್ತುತ ನನ್ನ ತಂಡದಲ್ಲೇ ಇದ್ದಾರೆ. ಆದರೆ ಅವರನ್ನು ಎದುರಿಸುವುದು ಅತ್ಯಂತ ಕಠಿಣ” ಎಂದು ಸೂರ್ಯಕುಮಾರ್ ಹೇಳಿದ್ದಾರೆ.

ಭಾರತೀಯ ಕ್ರಿಕೆಟ್‌ನ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ರೋಹಿತ್ ಶರ್ಮಾ ಅವರಲ್ಲಿ ಯಾರನ್ನು ಆಯ್ಕೆ ಮಾಡುತ್ತೀರಿ ಎಂಬ ಪ್ರಶ್ನೆಗೂ ಸೂರ್ಯಕುಮಾರ್ ಯಾದವ್ ಜಾಣ್ಮೆಯ ಉತ್ತರ ನೀಡಿದ್ದಾರೆ.

“ನಾನು ಸಚಿನ್ ಸರ್ ಅವರ ಆಟವನ್ನು ನೋಡುತ್ತಲೇ ಕ್ರಿಕೆಟ್ ಆಡಲು ಪ್ರಾರಂಭಿಸಿದೆ. ಆದರೆ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಮತ್ತು ಅವರೊಂದಿಗೆ ಸುದೀರ್ಘ ಕಾಲ ಕ್ರಿಕೆಟ್ ಆಡಿದ್ದೇನೆ. ಹಾಗಾಗಿ ಇಬ್ಬರಿಗೂ ನನ್ನ ಕಡೆಯಿಂದ 50-50 ಗೌರವ” ಎಂದು ಸೂರ್ಯಕುಮಾರ್ ಹೇಳಿದ್ದಾರೆ.

ಸೂರ್ಯಕುಮಾರ್ ಯಾದವ್ ಅವರು ಮಾರ್ಚ್ 2021ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅದೇ ವರ್ಷದ ಜುಲೈನಲ್ಲಿ ಏಕದಿನ ಕ್ರಿಕೆಟ್‌ಗೂ ಕಾಲಿಟ್ಟರು. ತಮ್ಮ ವಿಭಿನ್ನ 360 ಡಿಗ್ರಿ ಬ್ಯಾಟಿಂಗ್ ಶೈಲಿಯ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಪ್ರಮುಖ ಬ್ಯಾಟರ್ ಆಗಿ ಗುರುತಿಸಿಕೊಂಡರು.

2024ರ ಟಿ20 ವಿಶ್ವಕಪ್ ಗೆಲುವಿನ ಬಳಿಕ ರೋಹಿತ್ ಶರ್ಮಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು. ಬಳಿಕ ಬಿಸಿಸಿಐ ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ತಂಡದ ನಾಯಕನಾಗಿ ನೇಮಿಸಿತು.

ಸದ್ಯ ಟಿ20 ತಂಡದಲ್ಲಿ ಹಲವು ಬದಲಾವಣೆಗಳು ಹಾಗೂ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಯುತ್ತಿರುವ ನಡುವೆಯೇ, ಸೂರ್ಯಕುಮಾರ್ ಯಾದವ್ ಕೂಡ ತಮ್ಮ ಹಳೆಯ ಬ್ಯಾಟಿಂಗ್ ಲಯಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img