HomeCrime Newsಟ್ರಯಲ್ ವಿಳಂಬವಾಗುತ್ತಿದೆ, ಮಗಳ ಆರೈಕೆ ಮಾಡಬೇಕಿದೆ: ಪವಿತ್ರಾಗೌಡ ಜಾಮೀನಿಗೆ ವಕೀಲರ ಮನವಿ, SPP ಪ್ರಸನ್ನಕುಮಾರ್ ಆಕ್ಷೇಪ

ಟ್ರಯಲ್ ವಿಳಂಬವಾಗುತ್ತಿದೆ, ಮಗಳ ಆರೈಕೆ ಮಾಡಬೇಕಿದೆ: ಪವಿತ್ರಾಗೌಡ ಜಾಮೀನಿಗೆ ವಕೀಲರ ಮನವಿ, SPP ಪ್ರಸನ್ನಕುಮಾರ್ ಆಕ್ಷೇಪ

For Dai;y Updates Join Our whatsapp Group

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪವಿತ್ರಾಗೌಡ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಬೆಂಗಳೂರಿನ 59ನೇ ಸಿಸಿಹೆಚ್‌ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಪವಿತ್ರಾಗೌಡ ಪರ ಹಿರಿಯ ವಕೀಲ ಬಾಲನ್ ವಾದ ಮಂಡಿಸಿದ ಬಳಿಕ, ವಿಶೇಷ ಸರ್ಕಾರಿ ಅಭಿಯೋಜಕ (SPP) ಪ್ರಸನ್ನಕುಮಾರ್ ತಮ್ಮ ವಾದವನ್ನು ಆರಂಭಿಸಿದ್ದಾರೆ.

ಪವಿತ್ರಾಗೌಡ ಮಹಿಳೆಯಾಗಿದ್ದು, ಮಗಳ ಆರೈಕೆ ಮಾಡಬೇಕಿರುವ ಹಿನ್ನೆಲೆಯಲ್ಲಿ ಅವರಿಗೆ ಜಾಮೀನು ನೀಡಬೇಕು ಎಂದು ಹಿರಿಯ ವಕೀಲ ಬಾಲನ್ ನ್ಯಾಯಾಲಯದಲ್ಲಿ ಮನವಿ ಮಾಡಿದರು. ಪ್ರಕರಣದ ವಿಚಾರಣೆ ವಿಳಂಬವಾಗುತ್ತಿದ್ದು, ಪವಿತ್ರಾಗೌಡ ಈಗಾಗಲೇ ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿದ್ದಾರೆ ಎಂಬುದನ್ನೂ ನ್ಯಾಯಾಲಯದ ಗಮನಕ್ಕೆ ತಂದರು.

ಪ್ರಕರಣದಲ್ಲಿ ಬಹುತೇಕ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದೆ. ಕೆಲವು ಸಾಕ್ಷಿಗಳು ಸರ್ಕಾರಿ ಸಾಕ್ಷಿಗಳಾಗಿರುವುದರಿಂದ ಪವಿತ್ರಾಗೌಡ ಅವರಿಗೆ ಜಾಮೀನು ನೀಡಿದರೂ ಸಾಕ್ಷಿಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗುವ ಅಥವಾ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇಲ್ಲ ಎಂದು ಬಾಲನ್ ವಾದಿಸಿದರು.

ಟ್ರಯಲ್ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಜಾಮೀನು ನೀಡಬೇಕು ಎಂದು ಮನವಿ ಮಾಡಿದ ಅವರು, ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿರುವ ಆದೇಶದಲ್ಲಿರುವ ಒಂದು ವರ್ಷದ ಜಾಮೀನು ನಿರ್ಬಂಧ ಪವಿತ್ರಾಗೌಡ ಅವರಿಗೆ ಅನ್ವಯಿಸುವುದಿಲ್ಲ ಎಂದೂ ವಾದಿಸಿದರು.

ಇದಕ್ಕೆ ಪ್ರತಿಯಾಗಿ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನಕುಮಾರ್ ವಾದ ಆರಂಭಿಸಿದರು. ಟ್ರಯಲ್ ವಿಳಂಬವಾಗುತ್ತಿದೆ ಎಂಬ ಕಾರಣ ನೀಡಿ ಜಾಮೀನು ಕೋರುತ್ತಿರುವ ವಾದವನ್ನು ಅವರು ಪ್ರಶ್ನಿಸಿದರು.

ಸುಪ್ರೀಂ ಕೋರ್ಟ್ ಒಂದು ವರ್ಷದ ಅವಧಿಯಲ್ಲಿ 60 ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸುವಂತೆ ಸೂಚಿಸಿದೆ. 60 ಸಾಕ್ಷಿಗಳ ವಿಚಾರಣೆ ಪೂರ್ಣಗೊಳ್ಳುವವರೆಗೆ ಜಾಮೀನು ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಒಂದು ವರ್ಷದೊಳಗೆ 60 ಸಾಕ್ಷಿಗಳ ವಿಚಾರಣೆ ಪೂರ್ಣಗೊಳ್ಳದಿದ್ದಲ್ಲಿ ಮಾತ್ರ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು ಎಂದು ಪ್ರಸನ್ನಕುಮಾರ್ ವಾದಿಸಿದರು.

ಈ ಜಾಮೀನು ನಿರ್ಬಂಧ ಪವಿತ್ರಾಗೌಡ ಅವರಿಗೆ ಮಾತ್ರವಲ್ಲದೆ ಪ್ರಕರಣದಲ್ಲಿರುವ ಎಲ್ಲಾ ಆರೋಪಿಗಳಿಗೂ ಅನ್ವಯಿಸುತ್ತದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಇದೇ ವೇಳೆ ಪವಿತ್ರಾಗೌಡ ಪರ ಮತ್ತೋರ್ವ ವಕೀಲ ನಾರಾಯಣಸ್ವಾಮಿ, ಜೈಲಿನಲ್ಲಿ ಪವಿತ್ರಾಗೌಡ ಅವರಿಗೆ ತೊಂದರೆ ನೀಡಲಾಗುತ್ತಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

“ನಾವು ಪವಿತ್ರಾಗೌಡ ಅವರನ್ನು ಭೇಟಿಯಾಗಲು ಹೋದಾಗ, ಈ ಹಿಂಸೆ ತಡೆಯಲು ಆಗುತ್ತಿಲ್ಲ, ಒಂದು ತೊಟ್ಟು ವಿಷ ಕೊಡಿಸಿ ಎಂದು ಅವರು ಹೇಳುತ್ತಾರೆ. ಜೈಲಾಧಿಕಾರಿಗಳು ತಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಪವಿತ್ರಾಗೌಡ ತಿಳಿಸಿದ್ದಾರೆ. ಬೇರೆ ಪ್ರಕರಣಗಳ ಆರೋಪಿಗಳಿಗೆ ಈ ರೀತಿಯ ಯಾವುದೇ ಸಮಸ್ಯೆ ಇಲ್ಲ. ಆದರೆ ಈ ಪ್ರಕರಣದ ಆರೋಪಿಗಳಿಗೆ ಮಾತ್ರ ಹಿಂಸೆ ನೀಡಲಾಗುತ್ತಿದೆ” ಎಂದು ನಾರಾಯಣಸ್ವಾಮಿ ನ್ಯಾಯಾಲಯದಲ್ಲಿ ಹೇಳಿರುವುದಾಗಿ ತಿಳಿದುಬಂದಿದೆ.

ಪವಿತ್ರಾಗೌಡ ಅವರಿಂದ ಒಂದು ಪತ್ರ ನೀಡಲು ಅವಕಾಶ ಮಾಡಿಕೊಡಬೇಕು ಎಂದು ವಕೀಲ ನಾರಾಯಣಸ್ವಾಮಿ ನ್ಯಾಯಾಲಯಕ್ಕೆ ಮನವಿ ಮಾಡಿದರು. ಸದ್ಯ ಪ್ರಕರಣದ ಜಾಮೀನು ಅರ್ಜಿಯ ವಿಚಾರಣೆ ಮುಂದುವರಿದಿದ್ದು, ಪವಿತ್ರಾಗೌಡ ಪರ ವಕೀಲರು ಹಾಗೂ ವಿಶೇಷ ಸರ್ಕಾರಿ ಅಭಿಯೋಜಕರ ವಾದಗಳನ್ನು ನ್ಯಾಯಾಲಯ ಆಲಿಸುತ್ತಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img