ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊದಕೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಲಸೌಕರ್ಯಗಳ ಕೊರತೆ ಹಾಗೂ ಸ್ವಚ್ಛತೆಯ ಸಮಸ್ಯೆ ಎದುರಾಗಿದೆ.
ಶಾಲೆಯಲ್ಲಿ 36 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಶೌಚಾಲಯ ಬಳಕೆಗೆ ಸೂಕ್ತ ನೀರಿನ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಶಾಲೆಯಲ್ಲಿರುವ ನಳ ತುಂಡಾಗಿ ಹಲವು ತಿಂಗಳುಗಳಾಗಿದ್ದು, ಇನ್ನೂ ದುರಸ್ತಿ ಮಾಡಲಾಗಿಲ್ಲ ಎನ್ನಲಾಗಿದೆ. ಹೀಗಾಗಿ ಮಕ್ಕಳು ಬಾವಿಯಿಂದ ನೀರು ಸೇದಿ, ಭಾರವಾದ ಬಕೆಟ್ಗಳಲ್ಲಿ ನೀರು ತುಂಬಿಕೊಂಡು ಶೌಚಾಲಯಕ್ಕೆ ಕೊಂಡೊಯ್ದು ಬಳಸಬೇಕಾದ ಪರಿಸ್ಥಿತಿ ಇದೆ.
ಇದರ ಜೊತೆಗೆ ಶಾಲೆಯ ಸುತ್ತಮುತ್ತಲೂ ತ್ಯಾಜ್ಯ ಹಾಗೂ ಗಲೀಜು ಕಂಡುಬರುತ್ತಿದ್ದು, ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದೆ. ಬಾವಿಗೆ ಅಳವಡಿಸಿರುವ ವಿದ್ಯುತ್ ತಂತಿಯೂ ನೆಲಕ್ಕೆ ತಾಗುವ ಸ್ಥಿತಿಯಲ್ಲಿದೆ ಎನ್ನಲಾಗಿದ್ದು, ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಶಾಲೆಯ ಮೇಲ್ಭಾಗದಲ್ಲಿ ಅಳವಡಿಸಿರುವ ತಗಡಿನ ಶೀಟ್ಗಳೂ ಸರಿಯಾದ ರೀತಿಯಲ್ಲಿ ಇಲ್ಲ ಎನ್ನಲಾಗಿದ್ದು, ಬಲವಾದ ಗಾಳಿ ಬೀಸಿದ ಸಂದರ್ಭದಲ್ಲಿ ಅವು ಬಿದ್ದು ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಪೋಷಕರು ತಿಳಿಸಿದ್ದಾರೆ.



