ಹೃದಯಾಘಾತದ ಲಕ್ಷಣಗಳು ಕಾಣಿಸಿಕೊಂಡಾಗ ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಮುಖ್ಯ.
ಆದರೆ ಮನೆಯಲ್ಲಿ ಒಬ್ಬರೇ ಇದ್ದಾಗ ಹೃದಯಾಘಾತದ ಅನುಮಾನ ಬಂದರೆ ಏನು ಮಾಡಬೇಕು ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಗಾಬರಿಯಾಗದೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ.
ಮೊದಲಿಗೆ ತುರ್ತು ಸೇವೆಗೆ ಕರೆ ಮಾಡಿ. ಹೃದಯಾಘಾತದ ಅನುಮಾನ ಬಂದ ತಕ್ಷಣ ತುರ್ತು ವೈದ್ಯಕೀಯ ಸೇವೆಗೆ ಕರೆ ಮಾಡಬೇಕು. ಭಾರತದಲ್ಲಿ 112 ಅಥವಾ 108 ಸಂಖ್ಯೆಗೆ ಕರೆ ಮಾಡಬಹುದು. ಸಹಾಯಕ್ಕಾಗಿ ಕಾಯುತ್ತಾ ಸಮಯ ಕಳೆಯದೆ, ಸಾಧ್ಯವಾದಷ್ಟು ಬೇಗ ತುರ್ತು ಸೇವೆಯನ್ನು ಸಂಪರ್ಕಿಸಬೇಕು.
ಮನೆಯ ಬಾಗಿಲನ್ನು ಅನ್ಲಾಕ್ ಮಾಡಿ. ತುರ್ತು ಸೇವೆಗೆ ಕರೆ ಮಾಡಿದ ನಂತರ ಮನೆಯ ಮುಖ್ಯ ಬಾಗಿಲನ್ನು ಅನ್ಲಾಕ್ ಮಾಡಿ. ಸಾಧ್ಯವಾದರೆ ಹೊರಗಿನ ದೀಪಗಳನ್ನು ಆನ್ ಮಾಡಬಹುದು.
ಪ್ರಜ್ಞೆ ತಪ್ಪಿದರೆ ಅಥವಾ ನಡೆಯಲು ಸಾಧ್ಯವಾಗದ ಸ್ಥಿತಿ ಎದುರಾದರೆ, ಬಾಗಿಲು ಲಾಕ್ ಆಗಿರುವುದರಿಂದ ವೈದ್ಯಕೀಯ ಸಿಬ್ಬಂದಿ ಮನೆಯೊಳಗೆ ಪ್ರವೇಶಿಸಲು ತೊಂದರೆಯಾಗಬಹುದು.
ಸುರಕ್ಷಿತವಾಗಿ ಕುಳಿತುಕೊಳ್ಳಿ ಅಥವಾ ಮಲಗಿಕೊಳ್ಳಿ. ಬಾಗಿಲನ್ನು ಅನ್ಲಾಕ್ ಮಾಡಿದ ಬಳಿಕ ಸುರಕ್ಷಿತವಾದ ಸ್ಥಳದಲ್ಲಿ ಕುಳಿತುಕೊಳ್ಳಿ ಅಥವಾ ಮಲಗಿಕೊಳ್ಳಿ. ನಿಂತುಕೊಂಡು ಅಥವಾ ನಡೆಯುತ್ತಾ ಇರಬಾರದು. ತಲೆ ಸುತ್ತಿ ಪ್ರಜ್ಞೆ ತಪ್ಪಿದರೆ ಬಿದ್ದು ಗಾಯವಾಗುವ ಸಾಧ್ಯತೆಯಿರುವುದರಿಂದ ಸುರಕ್ಷಿತ ಭಂಗಿಯಲ್ಲಿ ಇರುವುದು ಮುಖ್ಯ.
ಕುಟುಂಬದವರಿಗೆ ಮಾಹಿತಿ ನೀಡಿ. ತುರ್ತು ಸೇವೆಗೆ ಕರೆ ಮಾಡಿದ ಬಳಿಕ ಕುಟುಂಬದವರು ಅಥವಾ ಆಪ್ತ ಸ್ನೇಹಿತರಿಗೆ ಕರೆ ಮಾಡಿ ಪರಿಸ್ಥಿತಿಯನ್ನು ತಿಳಿಸಬೇಕು. ನೀವು ಮನೆಯಲ್ಲಿ ಒಬ್ಬರೇ ಇರುವುದನ್ನೂ ಅವರಿಗೆ ತಿಳಿಸಬೇಕು.
ಆಸ್ಪಿರಿನ್ ಸೇವಿಸುವ ಮೊದಲು ಎಚ್ಚರಿಕೆ.
ಕೆಲವು ಸಂದರ್ಭಗಳಲ್ಲಿ ಆಸ್ಪಿರಿನ್ ಜಗಿಯುವಂತೆ ವೈದ್ಯಕೀಯ ಮಾರ್ಗಸೂಚಿಗಳಲ್ಲಿ ಸಲಹೆ ನೀಡಲಾಗುತ್ತದೆ. ಆದರೆ ಆಸ್ಪಿರಿನ್ಗೆ ಅಲರ್ಜಿ ಇರುವವರು, ಸಕ್ರಿಯ ರಕ್ತಸ್ರಾವ ಇರುವವರು ಅಥವಾ ವೈದ್ಯರು ಆಸ್ಪಿರಿನ್ ತೆಗೆದುಕೊಳ್ಳಬಾರದು ಎಂದು ಸೂಚಿಸಿರುವವರು ಸೇವಿಸಬಾರದು.
ಹೀಗಾಗಿ ಇಂತಹ ಸಂದರ್ಭದಲ್ಲಿ ತುರ್ತು ವೈದ್ಯಕೀಯ ಸಿಬ್ಬಂದಿಯ ಸೂಚನೆಗೆ ಆದ್ಯತೆ ನೀಡಬೇಕು.
ಹೃದಯಾಘಾತದ ಅನುಮಾನ ಬಂದಾಗ ಮನೆಯಲ್ಲೇ ಚಿಕಿತ್ಸೆ ಪಡೆಯಲು ಪ್ರಯತ್ನಿಸದೆ, ತಕ್ಷಣ ತುರ್ತು ವೈದ್ಯಕೀಯ ನೆರವು ಪಡೆಯುವುದು ಮುಖ್ಯ.



