ನವದೆಹಲಿ: ಆತ್ಮಸಾಕ್ಷಿ ಅಥವಾ ಧಾರ್ಮಿಕ ನಂಬಿಕೆಯ ಕಾರಣದಿಂದ ವಂದೇ ಮಾತರಂ ಹಾಡಲು ನಿರಾಕರಿಸುವವರ ವಿರುದ್ಧ ದಂಡನಾತ್ಮಕ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಸ್ಪಷ್ಟಪಡಿಸಿದೆ.
ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಕಡ್ಡಾಯವಾಗಿ ಹಾಡಬೇಕು ಎಂಬ ನಿಯಮ ಹಾಗೂ ಅದನ್ನು ಉಲ್ಲಂಘಿಸಿದರೆ ಶಿಕ್ಷೆ ವಿಧಿಸುವ ಕಾನೂನನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರವನ್ನು ತಿಳಿಸಿದೆ.
ಕರ್ನಾಟಕ ಸಂಗೀತ ಗಾಯಕ ಟಿ.ಎಂ. ಕೃಷ್ಣ ಅವರು ಅರ್ಜಿ ಸಲ್ಲಿಸಿದ್ದು, 2026ರಲ್ಲಿ ತಿದ್ದುಪಡಿ ಮಾಡಲಾದ ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ, 1971’ರ ಸೆಕ್ಷನ್ 3 ಹಾಗೂ ಕೇಂದ್ರ ಗೃಹ ಸಚಿವಾಲಯದ ಸುತ್ತೋಲೆಗಳನ್ನು ಪ್ರಶ್ನಿಸಿದ್ದಾರೆ.
ವಂದೇ ಮಾತರಂ ಹಾಡುವುದನ್ನು ನಿರಾಕರಿಸಿದವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸುವ ಅವಕಾಶ ಕಲ್ಪಿಸಿರುವುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ 1986ರ ‘ಬಿಜೋ ಇಮ್ಯಾನುಯೆಲ್ ವಿರುದ್ಧ ಕೇರಳ ರಾಜ್ಯ’ ಪ್ರಕರಣದ ತೀರ್ಪನ್ನು ಉಲ್ಲೇಖಿಸಿತು. ಧಾರ್ಮಿಕ ನಂಬಿಕೆಗೆ ವಿರುದ್ಧವಾಗಿರುವ ಕಾರಣ ರಾಷ್ಟ್ರಗೀತೆಯನ್ನು ಹಾಡದೆ, ಗೌರವ ಸೂಚಿಸಿದ್ದ ಶಾಲಾ ಮಕ್ಕಳಿಗೆ ಆ ತೀರ್ಪಿನಲ್ಲಿ ರಕ್ಷಣೆ ನೀಡಲಾಗಿತ್ತು.
ಪ್ರಸ್ತುತ ಪ್ರಕರಣದಲ್ಲೂ ಆತ್ಮಸಾಕ್ಷಿ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳನ್ನು ಪರಿಗಣಿಸಬೇಕಾದ ಅಗತ್ಯವಿದೆ ಎಂದು ನ್ಯಾಯಪೀಠ ವಿಚಾರಣೆ ವೇಳೆ ಹೇಳಿದೆ.



