ಬಳ್ಳಾರಿ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ವಿಜಯನಗರ ಜಿಲ್ಲೆಯಾದ್ಯಂತ ಬರ ಪರಿಸ್ಥಿತಿ ತೀವ್ರಗೊಂಡಿದ್ದು, ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಳೆಯಿಲ್ಲದೆ ಒಣಗುತ್ತಿರುವ ರಾಗಿ ಬೆಳೆಯನ್ನು ಉಳಿಸಿಕೊಳ್ಳಲು ರೈತರು ಇದೀಗ ಖಾಸಗಿ ನೀರಿನ ಟ್ಯಾಂಕರ್ಗಳ ಮೊರೆ ಹೋಗಿದ್ದಾರೆ.
ಕೊಟ್ಟೂರು ತಾಲೂಕಿನ ನಿಂಬಳಗೇರಿ ಗ್ರಾಮದಲ್ಲಿ ರೈತರ ಸಂಕಷ್ಟದ ಪರಿಸ್ಥಿತಿ ಎದ್ದು ಕಾಣುತ್ತಿದೆ. ಗ್ರಾಮದ ರೈತರಾದ ಸುರೇಶ ಶೆಟ್ಟಿ ಹಾಗೂ ಅಂಗಡಿ ಗಂಗಾಧರ ಅವರು ಒಟ್ಟು 12 ಎಕರೆ ಜಮೀನಿನಲ್ಲಿ ರಾಗಿ ಬಿತ್ತನೆ ಮಾಡಿದ್ದರು. ಆದರೆ, ಸಕಾಲದಲ್ಲಿ ಮಳೆಯಾಗದ ಜೊತೆಗೆ ಅಂತರ್ಜಲ ಮಟ್ಟವೂ ಕುಸಿದಿರುವುದರಿಂದ ಬೆಳೆಗಳಿಗೆ ತೀವ್ರ ನೀರಿನ ಕೊರತೆ ಎದುರಾಗಿದೆ.
ತೆನೆ ಕಟ್ಟುವ ಹಂತದಲ್ಲಿದ್ದ ರಾಗಿ ಬೆಳೆ ಇದೀಗ ಒಣಗುವ ಹಂತಕ್ಕೆ ತಲುಪಿದ್ದು, ಕಣ್ಣೆದುರೇ ಬೆಳೆ ಹಾಳಾಗುತ್ತಿರುವುದನ್ನು ಕಂಡು ರೈತರು ಆತಂಕಕ್ಕೊಳಗಾಗಿದ್ದಾರೆ. ಕೈಗೆ ಬಂದಷ್ಟು ಫಸಲನ್ನಾದರೂ ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಖಾಸಗಿ ವಾಟರ್ ಟ್ಯಾಂಕರ್ಗಳ ಮೂಲಕ ಜಮೀನಿಗೆ ನೀರು ಹರಿಸುತ್ತಿದ್ದಾರೆ.
ಪ್ರತಿದಿನ ಸುಮಾರು 5 ಸಾವಿರ ರೂಪಾಯಿ ಬಾಡಿಗೆ ಪಾವತಿಸಿ ಐದು ಟ್ಯಾಂಕರ್ಗಳ ಮೂಲಕ ಬೆಳೆಗೆ ನೀರುಣಿಸಲಾಗುತ್ತಿದೆ. ಈಗಾಗಲೇ ಕೃಷಿ ಚಟುವಟಿಕೆಗಳಿಗೆ ಸಾಕಷ್ಟು ಹಣ ಖರ್ಚು ಮಾಡಿರುವ ರೈತರಿಗೆ ಟ್ಯಾಂಕರ್ ನೀರಿನ ಹೆಚ್ಚುವರಿ ವೆಚ್ಚ ಮತ್ತಷ್ಟು ಹೊರೆಯಾಗಿದೆ. ಇದರಿಂದ ಸಾಲದ ಸುಳಿಗೆ ಸಿಲುಕುವ ಆತಂಕವೂ ರೈತರನ್ನು ಕಾಡುತ್ತಿದೆ.
ಮಳೆಯ ಕೊರತೆಯಿಂದ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ಕೂಡಲೇ ಬೆಳೆಹಾನಿ ಸಮೀಕ್ಷೆ ನಡೆಸಬೇಕು. ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರಧನ ನೀಡುವ ಮೂಲಕ ಸಂಕಷ್ಟದಲ್ಲಿರುವ ಅನ್ನದಾತರ ನೆರವಿಗೆ ಧಾವಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.



