ಹಾವೇರಿ: ಸಾರಿಗೆ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಪ್ರಯಾಣಿಕ ಮೃತಪಟ್ಟಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾವೇರಿ ತಾಲೂಕಿನ ಹಳೇರತ್ತಿ ಗ್ರಾಮದ ಬಳಿ ನಡೆದಿದೆ.
ಚನ್ನೂರು ಗ್ರಾಮದ ನಿವಾಸಿ ಎಸ್.ಎಸ್. ಮಠದ್ ಮೃತಪಟ್ಟ ದುರ್ದೈವಿ.
ಹಾವೇರಿಯಿಂದ ನೆಗಳೂರು ಗ್ರಾಮಕ್ಕೆ ತೆರಳುತ್ತಿದ್ದ ಸಾರಿಗೆ ಬಸ್‌ನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಈ ವೇಳೆ ಕ್ಯಾಬೇಜ್ ತುಂಬಿಸಿಕೊಂಡು ಸಾಗುತ್ತಿದ್ದ ಲಾರಿ ಬಸ್‌ಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಆರು ಮಂದಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಸ್ಥಳಕ್ಕೆ ಗುತ್ತಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

