ಬೆಂಗಳೂರು: ರಾಜ್ಯದಲ್ಲಿ ಬರ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಮೊದಲ ಕಂತಿನಲ್ಲಿ ರೈತರ ಖಾತೆಗಳಿಗೆ ಜಮೆಯಾಗಿರುವ ಹಣವೇ ಅಂತಿಮ ಪರಿಹಾರವಲ್ಲ. ರಾಜ್ಯದ ಪ್ರತಿಯೊಬ್ಬ ಅರ್ಹ ರೈತನಿಗೂ ಕನಿಷ್ಠ 5,000 ರೂಪಾಯಿ ಪರಿಹಾರ ನೀಡುವುದು ಖಚಿತ ಎಂದು ಭರವಸೆ ನೀಡಿದ್ದಾರೆ.
ಕೇಂದ್ರ ಸರ್ಕಾರದ SDRF ಮತ್ತು NDRF ಮಾರ್ಗಸೂಚಿಗಳ ಪ್ರಕಾರ ಮಳೆಯಾಶ್ರಿತ ಬೆಳೆಗಳಿಗೆ 1,500 ರೂ., ನೀರಾವರಿ ಬೆಳೆಗಳಿಗೆ 2,600 ರೂ. ಹಾಗೂ ಬಹುವಾರ್ಷಿಕ ಬೆಳೆಗಳಿಗೆ 3,200 ರೂ. ಪರಿಹಾರ ನಿಗದಿಯಾಗಿದೆ. ಆದರೆ ರಾಜ್ಯ ಸರ್ಕಾರ ಈ ಮೊತ್ತಕ್ಕಿಂತ ಹೆಚ್ಚಿನ ನೆರವು ನೀಡಲು ನಿರ್ಧರಿಸಿದ್ದು, ಮೂರೂ ವರ್ಗದ ಬೆಳೆಗಳಿಗೆ ಕನಿಷ್ಠ 5,000 ರೂ. ಪರಿಹಾರ ನೀಡಲಿದೆ. ಹೆಚ್ಚುವರಿ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಮೊದಲ ಕಂತಿನಲ್ಲಿ 2,000 ಅಥವಾ 2,500 ರೂ. ಪಡೆದಿರುವ ರೈತರಿಗೆ ಬಾಕಿ ಮೊತ್ತವನ್ನು ಮುಂದಿನ ಕಂತುಗಳಲ್ಲಿ ಪಾವತಿಸಲಾಗುವುದು. ಬೆಳೆ ನಷ್ಟದ ಪ್ರಮಾಣದ ಆಧಾರದ ಮೇಲೆ ಅರ್ಹ ರೈತರಿಗೆ ಗರಿಷ್ಠ 60,000 ರೂ.ವರೆಗೆ ಇನ್ಪುಟ್ ಸಬ್ಸಿಡಿ ನೆರವು ದೊರೆಯಲಿದೆ.
ಮೊದಲ ಕಂತಿನ ಹಣವೇ ಅಂತಿಮವಲ್ಲ:
ಬರ ಪರಿಹಾರ ವಿತರಣೆಯಲ್ಲಿ ಸರ್ಕಾರ ಹಣ ಕಡಿತ ಮಾಡಿದೆ ಎಂಬ ಆರೋಪಗಳ ಬೆನ್ನಲ್ಲೇ ಸಿಎಂ ಸ್ಪಷ್ಟನೆ ನೀಡಿದ್ದಾರೆ. ಮೊದಲ ಕಂತಿನಲ್ಲಿ ಜಮೆಯಾಗಿರುವ ಹಣವೇ ಪೂರ್ಣ ಪರಿಹಾರ ಎಂದು ರೈತರು ಭಾವಿಸಬಾರದು. ಅರ್ಹರಿಗೆ ಕನಿಷ್ಠ 5,000 ರೂ. ತಲುಪಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ ಎಂದು ಹೇಳಿದ್ದಾರೆ.
ವಿಪಕ್ಷಗಳ ಆರೋಪಕ್ಕೆ ಸರ್ಕಾರದ ಸ್ಪಷ್ಟನೆ:
ಬರ ಪರಿಹಾರವಾಗಿ ಭರವಸೆ ನೀಡಿದ್ದ 2,500 ರೂ. ಬದಲಿಗೆ ಕೆಲ ರೈತರ ಖಾತೆಗಳಿಗೆ 1,500ರಿಂದ 2,000 ರೂ. ಮಾತ್ರ ಜಮೆಯಾಗಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ಆರೋಪಿಸಿವೆ. ರೈತರಿಗೆ ಅನ್ಯಾಯವಾಗಿದೆ ಎಂದು ವಿಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ, ಬರ ಪರಿಹಾರದ ಕುರಿತು ಹರಡುತ್ತಿರುವ ವದಂತಿಗಳಿಗೆ ಕಿವಿಗೊಡದಂತೆ ರೈತರಲ್ಲಿ ಮನವಿ ಮಾಡಿದ್ದಾರೆ. ಸರ್ಕಾರವು ಅರ್ಹ ರೈತರಿಗೆ ಪೂರ್ಣ ಪ್ರಮಾಣದ ಪರಿಹಾರ ತಲುಪಿಸಲು ಬದ್ಧವಾಗಿದೆ ಎಂದು ತಿಳಿಸಿದ್ದಾರೆ.










