ಬೆಂಗಳೂರು: ಪಟಾಕಿ ಕಿಡಿ ತಗುಲಿ ಪ್ಲಾಸ್ಟಿಕ್ ಸ್ಕ್ರಾಪ್ ತುಂಬಿದ್ದ ಗೋಡೌನ್ನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡ ಘಟನೆ ನಗರದ ಕಸ್ತೂರಿಬಾ ನಗರದ ರುದ್ರಪ್ಪ ಗಾರ್ಡನ್ ಬಳಿ ನಡೆದಿದೆ.

ಪಟಾಕಿ ಸಿಡಿಸುವ ವೇಳೆ ಹಾರಿದ ಕಿಡಿ ಗೋಡೌನ್ಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿದ್ದು, ಗೋಡೌನ್ ಧಗಧಗನೆ ಉರಿಯತೊಡಗಿದೆ. ಇದರಿಂದ ಅಕ್ಕಪಕ್ಕದ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಮೂರು ವಾಹನಗಳೊಂದಿಗೆ ದೌಡಾಯಿಸಿದ್ದಾರೆ. ಬೆಂಕಿ ನಂದಿಸಲು ಸಿಬ್ಬಂದಿ ಹರಸಾಹಸ ಪಟ್ಟರೂ ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ. ಬಳಿಕ ಮತ್ತೊಂದು ಅಗ್ನಿಶಾಮಕ ವಾಹನ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆಗೆ ಕೈಜೋಡಿಸಿದೆ.
ಬೆಂಕಿಯ ತೀವ್ರತೆಯಿಂದ ಅಕ್ಕಪಕ್ಕದ ಕಟ್ಟಡಗಳಿಗೂ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.









