ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನದಿಂದ ಆರಂಭವಾಗಿರುವ ಮಳೆ ಶುಕ್ರವಾರವೂ ಮುಂದುವರಿದಿದೆ.
ಇದರ ನಡುವೆ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮಳೆನೀರು ಕಂದು ಬಣ್ಣಕ್ಕೆ ತಿರುಗಿರುವುದು ಸ್ಥಳೀಯರ ಗಮನಕ್ಕೆ ಬಂದಿದ್ದು, ಆತಂಕ ಹಾಗೂ ಚರ್ಚೆಗೆ ಕಾರಣವಾಗಿದೆ.
ಮಡಿಕೇರಿ ತಾಲೂಕಿನ ಎಮ್ಮೆಮಾಡು, ಮರುಗೋಡು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಪಾರದರ್ಶಕವಾಗಿ ಕಾಣಬೇಕಾದ ಮಳೆನೀರು ಕೆಲವೆಡೆ ಕಂದು ಬಣ್ಣದಲ್ಲಿ ಕಂಡುಬಂದಿದೆ. ಮಳೆನೀರಿನ ಬಣ್ಣ ಬದಲಾವಣೆಗೆ ನಿಖರ ಕಾರಣವೇನು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.
ಈ ನಡುವೆ ಮಳೆನೀರಿನ ಬಣ್ಣ ಬದಲಾವಣೆಗೆ ಮೋಡ ಬಿತ್ತನೆಯೇ ಕಾರಣವೇ ಎಂಬ ಚರ್ಚೆಯೂ ಸ್ಥಳೀಯರಲ್ಲಿ ನಡೆಯುತ್ತಿದೆ. ಆದರೆ ಇದಕ್ಕೆ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.
ಮಳೆಯ ಸಂದರ್ಭದಲ್ಲಿ ಗಾಳಿಯಲ್ಲಿರುವ ಧೂಳು, ಮಣ್ಣಿನ ಸೂಕ್ಷ್ಮ ಕಣಗಳು ಸೇರಿದಂತೆ ವಿವಿಧ ಕಣಗಳು ಮಳೆಯೊಂದಿಗೆ ಕೆಳಗೆ ಬರುವುದರಿಂದ ಕೆಲವೊಮ್ಮೆ ಮಳೆನೀರಿನ ಬಣ್ಣದಲ್ಲಿ ಬದಲಾವಣೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ ಕೊಡಗಿನಲ್ಲಿ ಕಂಡುಬಂದಿರುವ ಕಂದು ಬಣ್ಣದ ಮಳೆನೀರಿಗೆ ಇದೇ ನಿಖರ ಕಾರಣ ಎಂದು ಸದ್ಯಕ್ಕೆ ಹೇಳಲು ಸಾಧ್ಯವಿಲ್ಲ.
ಹೀಗಾಗಿ ಮಳೆನೀರಿನ ಮಾದರಿಯನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ಪರೀಕ್ಷೆ ನಡೆಸುವ ಮೂಲಕ ಬಣ್ಣ ಬದಲಾವಣೆಯ ನೈಜ ಕಾರಣವನ್ನು ಪತ್ತೆಹಚ್ಚಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.



