ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ನಡೆದ ಕೆಎಸ್‌ಆರ್‌ಪಿ, ಕೆಎಸ್‌ಐಎಸ್‌ಎಫ್ ಹಾಗೂ ಐಆರ್‌ಬಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ ಪ್ರಕಟವಾಗಿದೆ.
ಸೆಪ್ಟೆಂಬರ್ 20ರಂದು ನಡೆದಿದ್ದ ಪರೀಕ್ಷೆಯ ಫಲಿತಾಂಶವನ್ನು ಕೇವಲ ಐದು ದಿನಗಳಲ್ಲೇ ಅಂದರೆ ಸೆಪ್ಟೆಂಬರ್ 25ರಂದು ಪ್ರಕಟಿಸಲಾಗಿದೆ. ಕಡಿಮೆ ಅವಧಿಯಲ್ಲಿ ಫಲಿತಾಂಶ ಪ್ರಕಟಿಸಿರುವುದು ಪ್ರಾಧಿಕಾರದ ಪ್ರಮುಖ ಸಾಧನೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಈ ಪರೀಕ್ಷೆಗೆ ರಾಜ್ಯಾದ್ಯಂತ ಒಟ್ಟು 1,46,451 ಅಭ್ಯರ್ಥಿಗಳು ಹಾಜರಾಗಿದ್ದರು. ಇದರಲ್ಲಿ ಉಳಿಕೆ ಮೂಲ ವೃಂದದ 1,13,390 ಅಭ್ಯರ್ಥಿಗಳು ಹಾಗೂ ಕಲ್ಯಾಣ ಕರ್ನಾಟಕ ವೃಂದದ 33,061 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಆಕ್ಷೇಪಣೆ ಸಲ್ಲಿಸಲು ಸೆ.27 ಕೊನೆಯ ದಿನ:
ಪ್ರಕಟವಾಗಿರುವ ತಾತ್ಕಾಲಿಕ ಫಲಿತಾಂಶಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಯಾವುದೇ ಆಕ್ಷೇಪಣೆಗಳಿದ್ದರೆ, ಕೆಇಎ ಒದಗಿಸಿರುವ ಅಧಿಕೃತ ಲಿಂಕ್ ಮೂಲಕ ಸೆಪ್ಟೆಂಬರ್ 27ರೊಳಗೆ ಸಲ್ಲಿಸಬಹುದಾಗಿದೆ.
ಪರೀಕ್ಷೆ ನಡೆದ ದಿನವೇ OMR ಸ್ಕ್ಯಾನ್:
ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಪರೀಕ್ಷೆ ನಡೆದ ದಿನವೇ ಅಭ್ಯರ್ಥಿಗಳ ಎಲ್ಲಾ OMR ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಲಾಗಿತ್ತು. ಬಳಿಕ ಅವುಗಳನ್ನು ಕೆಇಎ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಅಭ್ಯರ್ಥಿಗಳು ತಮ್ಮ ತಾತ್ಕಾಲಿಕ ಫಲಿತಾಂಶವನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ನಿಗದಿತ ಅವಧಿಯೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಲಾಗಿದೆ.



