HomeCrime Newsಗದಗ KRIDL AEE ನಾಪತ್ತೆ; ಆತ್ಮಹತ್ಯೆ ಪತ್ರ ಪತ್ತೆ, ಕುಟುಂಬ ಕಂಗಾಲು

ಗದಗ KRIDL AEE ನಾಪತ್ತೆ; ಆತ್ಮಹತ್ಯೆ ಪತ್ರ ಪತ್ತೆ, ಕುಟುಂಬ ಕಂಗಾಲು

ಗದಗ: ಸರ್ಕಾರದಿಂದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದಿದ್ದಾಗಿ ಪತ್ರ ಬರೆದಿರುವ ಗದಗದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (KRIDL) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ಫರ್ವಿಜ್ ಧಾರವಾಡ ನಾಪತ್ತೆಯಾಗಿರುವ ಘಟನೆ ಆತಂಕ ಮೂಡಿಸಿದೆ.

ಸೆ.12ರಂದು KRIDLನ ಬೆಂಗಳೂರಿನ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವ ಫರ್ವಿಜ್ ಧಾರವಾಡ, ತಮ್ಮ ಉಪವಿಭಾಗಕ್ಕೆ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗದಿರುವುದರಿಂದ ಎದುರಾಗಿರುವ ಸಮಸ್ಯೆಗಳನ್ನು ಪತ್ರದಲ್ಲಿ ವಿವರಿಸಿದ್ದಾರೆ ಎನ್ನಲಾಗಿದೆ. ಕಾಮಗಾರಿಗಳ ಹಣ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಸಬ್‌ಕಾಂಟ್ರಾಕ್ಟರ್‌ಗಳು ಮನೆ ಮುಂದೆ ಬಂದು ಕೂಗಾಟ ಮಾಡುತ್ತಿದ್ದರು. ಅಲ್ಲದೆ, ಸರ್ಕಾರದಿಂದ ಅನುದಾನ ಬಾರದ ಕಾರಣ ನಿತ್ಯ ದೂರವಾಣಿ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು. ಇದರಿಂದ ತಮ್ಮ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಪತ್ರದಲ್ಲಿ, ನಾನು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸೋತಿದ್ದೇನೆ. ನನ್ನ ಜೀವನವನ್ನೇ ಕೊನೆಗಾಣಿಸುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ” ಎಂದು ಬರೆದಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಅಲ್ಲದೆ, ಸದರಿ ಉಪವಿಭಾಗಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಿ ಸಮಸ್ಯೆ ಬಗೆಹರಿಸಬೇಕು. ಬೇರೆ AEEಯನ್ನು ನಿಯೋಜಿಸಬೇಕು. ನನ್ನ ಕುಟುಂಬದವರಿಗೆ ಯಾವುದೇ ರೀತಿಯ ಕಿರುಕುಳ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸೆ.13ರಂದು ಬೆಂಗಳೂರಿನಲ್ಲಿ ಸಭೆ ಇದೆ ಎಂದು ಮನೆಯಿಂದ ತೆರಳಿದ್ದ ಫರ್ವಿಜ್ ಬಳಿಕ ಕುಟುಂಬಸ್ಥರ ಸಂಪರ್ಕಕ್ಕೆ ಸಿಕ್ಕಿಲ್ಲ. ಹಲವು ದಿನಗಳಾದರೂ ಮನೆಗೆ ವಾಪಸ್ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡು ಹುಡುಕಾಟ ನಡೆಸಿದ್ದಾರೆ. ಸೆ.16ರಂದು ಗದಗದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.

ಪತ್ನಿ, ಓರ್ವ ಮಗಳು, ತಂದೆ-ತಾಯಿ ಹಾಗೂ ಸಹೋದರರನ್ನು ಅಗಲಿರುವ ಫರ್ವಿಜ್ ಅವರ ಪತ್ತೆಯಾಗದಿರುವುದು ಕುಟುಂಬಸ್ಥರನ್ನು ಕಂಗಾಲಾಗಿಸಿದೆ. ಆತ್ಮಹತ್ಯೆ ಕುರಿತು ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಫರ್ವಿಜ್ ಅವರನ್ನು ಆದಷ್ಟು ಬೇಗ ಪತ್ತೆಹಚ್ಚಿ, ಅವರಿಗೆ ಎದುರಾಗಿರುವ ಸಮಸ್ಯೆಯನ್ನು ಪರಿಹರಿಸಬೇಕು. ಪೊಲೀಸ್ ಇಲಾಖೆ ವಿಶೇಷ ತಂಡ ರಚಿಸಿ ಹುಡುಕಾಟ ನಡೆಸಬೇಕು ಎಂದು ಕುಟುಂಬಸ್ಥರು ಸರ್ಕಾರ ಹಾಗೂ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಫರ್ವಿಜ್ ಅವರ ಪತ್ತೆಗಾಗಿ ಪೊಲೀಸರು ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img