ದೇವನಹಳ್ಳಿ: ರಾಮನಗರದ ದೊಡ್ಡೇರಿ ಫಾರ್ಮ್‌ಹೌಸ್‌ನಲ್ಲಿ ಪತ್ತೆಯಾಗಿದ್ದ ನಕಲಿ ಔಷಧ ಜಾಲ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
ಪ್ರಕರಣದ ಪ್ರಮುಖ ಕಿಂಗ್‌ಪಿನ್ ಎಂದು ತನಿಖಾ ತಂಡ ಶಂಕಿಸಿರುವ ಪ್ರಶಾಂತ್ ರಂಜನ್ ಬಾಬುನನ್ನು ಅಜರ್‌ಬೈಜಾನ್‌ನಿಂದ ವಾಪಸ್ ಬಂದ ವೇಳೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಮುಂಜಾನೆ ಅಜರ್‌ಬೈಜಾನ್‌ನಿಂದ ಕೆಐಎಗೆ ಬಂದ ಪ್ರಶಾಂತ್‌ನನ್ನು ಲುಕ್‌ಔಟ್ ನೋಟಿಸ್ ಆಧರಿಸಿ ವಿಮಾನ ನಿಲ್ದಾಣದ ಅರೈವಲ್ ಗೇಟ್‌ನಲ್ಲೇ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಳಿಕ ಆತನನ್ನು ಎಸಿಪಿ ಅಂಜನ್ ಕುಮಾರ್ ನೇತೃತ್ವದ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ.
ದೊಡ್ಡೇರಿ ಫಾರ್ಮ್‌ಹೌಸ್‌ನಲ್ಲಿ ನಡೆದಿದ್ದ ನಕಲಿ ಔಷಧ ದಂಧೆಯ ತನಿಖೆ ವೇಳೆ ಪ್ರಶಾಂತ್ ರಂಜನ್ ಬಾಬು ಪ್ರಮುಖ ಆರೋಪಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ತನಿಖೆ ಮುಂದುವರಿದಾಗ ಆತ ಅಜರ್‌ಬೈಜಾನ್‌ನಲ್ಲಿರುವುದು ಪತ್ತೆಯಾಗಿತ್ತು. ಸೆಪ್ಟೆಂಬರ್ 9ರಂದು ವೀಸಾ ಅವಧಿ ಮುಗಿದ ಹಿನ್ನೆಲೆಯಲ್ಲಿ ಅಲ್ಲಿನ ಕಸ್ಟಮ್ಸ್ ಅಧಿಕಾರಿಗಳ ವಶದಲ್ಲಿದ್ದ ಎಂದು ತಿಳಿದುಬಂದಿದೆ.
ಭಾರತ ಮತ್ತು ಅಜರ್‌ಬೈಜಾನ್ ನಡುವೆ ಆರೋಪಿಯನ್ನು ನೇರವಾಗಿ ಹಸ್ತಾಂತರಿಸಿಕೊಳ್ಳುವ ವ್ಯವಸ್ಥೆ ಇಲ್ಲದ ಕಾರಣ, ಭಾರತಕ್ಕೆ ವಾಪಸ್ ಬಂದ ಬಳಿಕ ಲುಕ್‌ಔಟ್ ನೋಟಿಸ್ ಆಧರಿಸಿ ಬಂಧಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದರು. ಇದೀಗ ಭಾರತಕ್ಕೆ ಮರಳುತ್ತಿದ್ದಂತೆಯೇ ಪ್ರಶಾಂತ್ ಬಂಧನವಾಗಿದೆ.
ಇನ್ನು ಇದೇ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ವೀರೇಶ್ ಜೈನ್ ನಕಲಿ ಔಷಧಗಳ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಬೆಂಗಳೂರಿನ ವಿವಿಧ ಆಸ್ಪತ್ರೆಗಳು ಹಾಗೂ ಮೆಡಿಕಲ್‌ಗಳಿಗೆ ನಕಲಿ ಔಷಧಗಳನ್ನು ಪೂರೈಸಲಾಗುತ್ತಿತ್ತು ಎನ್ನಲಾಗಿದ್ದು, ಈ ಜಾಲದ ವಾರ್ಷಿಕ ವಹಿವಾಟು ಸುಮಾರು ₹15 ಕೋಟಿ ಇತ್ತು ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ವೇಳೆ ರಾಮನಗರದ ದೊಡ್ಡೇರಿ ಗ್ರಾಮದ ಬಳಿಯ ಫಾರ್ಮ್‌ಹೌಸ್‌ನಲ್ಲಿ ನಡೆಯುತ್ತಿದ್ದ ನಕಲಿ ಔಷಧ ದಂಧೆ ಬೆಳಕಿಗೆ ಬಂದಿತ್ತು. ಬಳಿಕ ತನಿಖೆ ವಿಸ್ತರಿಸಿದಂತೆ ನಕಲಿ ಔಷಧಗಳ ಉತ್ಪಾದನೆ, ಪೂರೈಕೆ ಹಾಗೂ ಆಸ್ಪತ್ರೆಗಳು ಮತ್ತು ಮೆಡಿಕಲ್‌ಗಳಿಗೆ ಅವುಗಳನ್ನು ತಲುಪಿಸುತ್ತಿದ್ದ ಬೃಹತ್ ಜಾಲದ ಬಗ್ಗೆ ಮಾಹಿತಿ ಲಭ್ಯವಾಗಿತ್ತು.
ಪ್ರಕರಣದ ತನಿಖೆ ರಾಜ್ಯದ ಗಡಿ ದಾಟಿದ್ದು, ಹಲವು ರಾಜ್ಯಗಳಲ್ಲೂ ದಾಳಿ ನಡೆಸಲಾಗಿದೆ. ನಕಲಿ ಔಷಧ ಜಾಲಕ್ಕೆ ಅಂತರರಾಜ್ಯ ಹಾಗೂ ಅಂತಾರಾಷ್ಟ್ರೀಯ ಸಂಪರ್ಕಗಳಿರುವ ಬಗ್ಗೆಯೂ ತನಿಖಾ ತಂಡಕ್ಕೆ ಸುಳಿವು ಸಿಕ್ಕಿದೆ. ಟರ್ಕಿಯಿಂದ ನಕಲಿ ಲೇಬಲ್‌ಗಳನ್ನು ತರಿಸಿ ಔಷಧಗಳ ಪೂರೈಕೆಗೆ ಬಳಸಲಾಗುತ್ತಿತ್ತು ಎಂಬ ಮಾಹಿತಿಯೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಶಾಂತ್ ರಂಜನ್ ಬಾಬು ಬಂಧನದ ಬಳಿಕ ದೊಡ್ಡೇರಿ ಫಾರ್ಮ್‌ಹೌಸ್‌ನಿಂದ ನಡೆಯುತ್ತಿದ್ದ ನಕಲಿ ಔಷಧ ಜಾಲದ ಹಣಕಾಸು ವ್ಯವಹಾರ, ಪೂರೈಕೆ ವ್ಯವಸ್ಥೆ ಹಾಗೂ ಇತರ ಆರೋಪಿಗಳ ಸಂಪರ್ಕದ ಕುರಿತು ತನಿಖೆ ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆಯಿದೆ.



