HomeBengaluru Newsಬ್ಯಾಂಕ್ ಗ್ರಾಹಕರಿಗೆ ಗುಡ್‌ನ್ಯೂಸ್; 3 ದಿನಗಳ ದೇಶವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿಕೆ!

ಬ್ಯಾಂಕ್ ಗ್ರಾಹಕರಿಗೆ ಗುಡ್‌ನ್ಯೂಸ್; 3 ದಿನಗಳ ದೇಶವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿಕೆ!

ಬೆಂಗಳೂರು: ಬ್ಯಾಂಕ್ ಉದ್ಯೋಗಿಗಳ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿದಂತೆ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ಮತ್ತು ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ನಡುವೆ ನಡೆದ ಸುದೀರ್ಘ ಮಾತುಕತೆ ಯಶಸ್ವಿಯಾಗಿದೆ.

ಹೀಗಾಗಿ ಸೆಪ್ಟೆಂಬರ್ 28ರಿಂದ 30ರವರೆಗೆ ನಡೆಯಬೇಕಿದ್ದ 3 ದಿನಗಳ ದೇಶವ್ಯಾಪಿ ಬ್ಯಾಂಕ್ ಮುಷ್ಕರವನ್ನು ಮುಂದೂಡಲಾಗಿದೆ.

ಮುಷ್ಕರ ಮುಂದೂಡಿಕೆಯಾಗಿರುವುದರಿಂದ ದೇಶಾದ್ಯಂತ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಮುಂದುವರಿಯಲಿವೆ. ಇದರಿಂದ ಬ್ಯಾಂಕ್ ಗ್ರಾಹಕರಿಗೆ ತಾತ್ಕಾಲಿಕವಾಗಿ ನೆಮ್ಮದಿ ಸಿಕ್ಕಂತಾಗಿದೆ.

ವಾರದಲ್ಲಿ 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ UFBU ಸೆಪ್ಟೆಂಬರ್ 28ರಿಂದ 30ರವರೆಗೆ ಮುಷ್ಕರಕ್ಕೆ ಕರೆ ನೀಡಿತ್ತು. ಆದರೆ ಭಾನುವಾರ ನಡೆದ ಮಹತ್ವದ ಸಭೆಯಲ್ಲಿ ಉದ್ಯೋಗಿಗಳ ಬೇಡಿಕೆಗಳ ಕುರಿತು ಧನಾತ್ಮಕ ಚರ್ಚೆ ನಡೆದಿದ್ದು, ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲು ನಿರ್ಧರಿಸಲಾಗಿದೆ.

ಎಲ್ಲ ಶನಿವಾರಗಳನ್ನು ರಜಾದಿನಗಳಾಗಿ ಘೋಷಿಸುವ ಬೇಡಿಕೆ ಕುರಿತು ಚರ್ಚಿಸಲು IBA ಮತ್ತು UFBU ಪ್ರತಿನಿಧಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿ ರಚಿಸಲು ಒಪ್ಪಿಗೆ ನೀಡಲಾಗಿದೆ. ಗ್ರಾಹಕರ ಹಿತಾಸಕ್ತಿಗೆ ಧಕ್ಕೆಯಾಗದಂತೆ ಪರ್ಯಾಯ ಮಾರ್ಗ ಕಂಡುಕೊಳ್ಳುವ ಬಗ್ಗೆ ಸಮಿತಿ ಚರ್ಚಿಸಲಿದೆ.

ಇನ್ನು ಸ್ಕೇಲ್ IV ಹಾಗೂ ಅದಕ್ಕಿಂತ ಹೆಚ್ಚಿನ ಅಧಿಕಾರಿಗಳಿಗೆ ಸಂಬಂಧಿಸಿದ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕ ಯೋಜನೆ (PLI) ಕುರಿತು ಒಕ್ಕೂಟಗಳು ವ್ಯಕ್ತಪಡಿಸಿರುವ ಆಕ್ಷೇಪಣೆಗಳನ್ನು ಪರಿಹರಿಸಲು ಅಗತ್ಯ ಮಾರ್ಪಾಡುಗಳನ್ನು ಸರ್ಕಾರಕ್ಕೆ ಪ್ರಸ್ತಾಪಿಸಲು IBA ಒಪ್ಪಿಕೊಂಡಿದೆ.

2024ರ ಮಾರ್ಚ್ 8ರ ಸಭೆಯ ನಡಾವಳಿಯಲ್ಲಿ ಉಲ್ಲೇಖವಾಗಿರುವ ಬಾಕಿ ಸಮಸ್ಯೆಗಳನ್ನೂ ಶೀಘ್ರವಾಗಿ ಚರ್ಚಿಸಿ ಇತ್ಯರ್ಥಪಡಿಸಲು ಎರಡೂ ಕಡೆಯವರು ಸಮ್ಮತಿಸಿದ್ದಾರೆ.

ಮುಷ್ಕರ ಮುಂದೂಡಿಕೆಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ಖಾಸಗಿ ಬ್ಯಾಂಕ್‌ಗಳು ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ಸೇವೆಗಳು ಎಂದಿನಂತೆ ಲಭ್ಯವಾಗಲಿವೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img