HomeGadag Newsಪರ್ವೇಜ್ ಪತ್ತೆಗೆ ಕುಮಾರಸ್ವಾಮಿ, ಎಚ್.ಕೆ. ಪಾಟೀಲ ಭರವಸೆ: ತಂದೆ ಜಾಫರ್‌ಗೆ ದೂರವಾಣಿ ಮೂಲಕ ಧೈರ್ಯ

ಪರ್ವೇಜ್ ಪತ್ತೆಗೆ ಕುಮಾರಸ್ವಾಮಿ, ಎಚ್.ಕೆ. ಪಾಟೀಲ ಭರವಸೆ: ತಂದೆ ಜಾಫರ್‌ಗೆ ದೂರವಾಣಿ ಮೂಲಕ ಧೈರ್ಯ

ವಿಜಯಸಾಕ್ಷಿ ಸುದ್ದಿ, ಗದಗ

ನಾಪತ್ತೆಯಾಗಿರುವ ಕೆಆರ್‌ಐಡಿಎಲ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪರ್ವೇಜ್ ಧಾರವಾಡ ಅವರ ತಂದೆ ಜಾಫರ್ ಅವರನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಗದಗ ಶಾಸಕ ಎಚ್.ಕೆ. ಪಾಟೀಲ ದೂರವಾಣಿ ಮೂಲಕ ಸಂಪರ್ಕಿಸಿ ಧೈರ್ಯ ತುಂಬಿದ್ದಾರೆ.

ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಮೂಲಕ ಜಾಫರ್ ಅವರನ್ನು ಸಂಪರ್ಕಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಪರ್ವೇಜ್ ನಾಪತ್ತೆ ಪ್ರಕರಣದ ಕುರಿತು ಮಾಹಿತಿ ಪಡೆದುಕೊಂಡರು. ಕಾಮಗಾರಿ ಬಾಕಿ ಬಿಲ್‌ಗಳ ವಿಚಾರದಲ್ಲಿ ಪರ್ವೇಜ್ ವಿರುದ್ಧ ಯಾವುದಾದರೂ ದೂರು ಇತ್ತೇ ಎಂಬುದರ ಕುರಿತು ವಿಚಾರಿಸಿದರು. ಮುಖ್ಯಮಂತ್ರಿ ದೂರು ಇತ್ತು ಎಂದು ಹೇಳಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಮಾಹಿತಿ ಇದೆಯೇ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಾಫರ್, ತಮ್ಮ ಮಗ ಪರ್ವೇಜ್ ವಿರುದ್ಧ ಯಾವುದೇ ದೂರು ಇರಲಿಲ್ಲ ಎಂದು ತಿಳಿಸಿದ್ದಾರೆ.

ಕೆಲಸದ ವಿಚಾರವನ್ನೂ ಮನೆಯಲ್ಲಿ ಹೇಳುತ್ತಿರಲಿಲ್ಲ

ಮತ್ತೊಂದೆಡೆ ಗದಗ ಶಾಸಕ ಎಚ್.ಕೆ. ಪಾಟೀಲ ಕೂಡ ದೂರವಾಣಿ ಮೂಲಕ ಜಾಫರ್ ಅವರನ್ನು ಸಂಪರ್ಕಿಸಿ ಧೈರ್ಯ ತುಂಬಿದರು. ಕಾಂಗ್ರೆಸ್ ಯುವ ಮುಖಂಡ ಸಯ್ಯದ ಖಾಲಿದ್ ಕೊಪ್ಪಳ ಅವರ ಮೂಲಕ ಜಾಫರ್ ಅವರೊಂದಿಗೆ ಮಾತನಾಡಿದ ಪಾಟೀಲ, ಪರ್ವೇಜ್ ಚುರುಕಿನ ಅಧಿಕಾರಿಯಾಗಿದ್ದು, ಮಿತಭಾಷಿಯಾಗಿದ್ದರು. ಈ ರೀತಿಯಾಗಿ ನಾಪತ್ತೆಯಾಗಿರುವುದು ಆಶ್ಚರ್ಯ ಮೂಡಿಸಿದೆ ಎಂದು ಹೇಳಿದರು.

ನಾಪತ್ತೆಯಾಗುವ ಮುನ್ನ ಪರ್ವೇಜ್ ಮನೆಯಲ್ಲಿ ಯಾವುದಾದರೂ ವಿಷಯ ತಿಳಿಸಿದ್ದರೇ ಎಂಬುದನ್ನು ಪಾಟೀಲ ವಿಚಾರಿಸಿದರು. ಇದಕ್ಕೆ ಜಾಫರ್, ಪರ್ವೇಜ್ ಮನೆಯಲ್ಲಿ ಯಾವುದೇ ವಿಷಯ ಹೇಳಿರಲಿಲ್ಲ. ಸಾಮಾನ್ಯವಾಗಿ ತಮ್ಮ ಕೆಲಸದ ವಿಚಾರಗಳನ್ನೂ ಮನೆಯಲ್ಲಿ ಹೇಳುತ್ತಿರಲಿಲ್ಲ ಎಂದು ತಿಳಿಸಿದರು.

ನನ್ನ ಮಗನನ್ನು ಆದಷ್ಟು ಬೇಗ ಹುಡುಕಿಕೊಡಿ

ಪರ್ವೇಜ್ ಅವರನ್ನು ಆದಷ್ಟು ಬೇಗ ಹುಡುಕಿಕೊಡುವಂತೆ ಜಾಫರ್ ಅವರು ಶಾಸಕ ಎಚ್.ಕೆ. ಪಾಟೀಲ ಅವರಿಗೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಶಾಸಕರು, ಈ ಕುರಿತು ಪೊಲೀಸರೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿ ಜಾಫರ್ ಅವರಿಗೆ ಧೈರ್ಯ ತುಂಬಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img