ಬೆಂಗಳೂರು: ಯಲಹಂಕದಲ್ಲಿ ನಡೆದ ರಿಯಲ್ ಎಸ್ಟೇಟ್ ಉದ್ಯಮಿ ಚರಣ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆಘಾತಕಾರಿ ವಿಚಾರಗಳು ಬೆಳಕಿಗೆ ಬಂದಿವೆ. ಆರೋಪಿ ಕಿರಣ್ 30 ಲಕ್ಷ ರೂಪಾಯಿ ಸುಪಾರಿ ನೀಡಿ ಕೊಲೆಗೆ ಸಂಚು ರೂಪಿಸಿದ್ದಾನೆ ಎಂಬ ಮಾಹಿತಿ ಆರು ತಿಂಗಳ ಹಿಂದೆಯೇ ಚರಣ್ ಅವರ ಆಪ್ತರಿಗೆ ತಿಳಿದಿತ್ತು ಎನ್ನಲಾಗಿದೆ.
ಆದರೆ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದ ಚರಣ್, ಆರೋಪಿ ಕಿರಣ್ ತನ್ನ ಸ್ನೇಹಿತ ಎಂದು ನಂಬಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಕಳೆದ ಆರು ತಿಂಗಳ ಹಿಂದೆಯೇ ಕಿರಣ್, ಚರಣ್ ಗೌಡ ಕೊಲೆಗೆ ಸುಪಾರಿ ನೀಡಿದ್ದಾನೆ ಎಂಬ ಗುಸುಗುಸು ಕೇಳಿಬಂದಿತ್ತು. ಈ ವಿಚಾರವನ್ನು ಚರಣ್ ಅವರ ಆಪ್ತರು ಅವರ ಗಮನಕ್ಕೆ ತಂದು, ಕಿರಣ್ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದರು.
ಆದರೆ, ಇದಕ್ಕೆ ಪ್ರತಿಕ್ರಿಯಿಸಿದ್ದ ಚರಣ್, “ಕಿರಣ್ ನನ್ನ ಸ್ನೇಹಿತ. ನಾನೇ ಕರೆದು ಮಾತನಾಡುತ್ತೇನೆ. ನಮ್ಮ ಸ್ನೇಹ ಚೆನ್ನಾಗಿದೆ. ನಮ್ಮ ನಡುವೆ ಬೇರೆಯವರು ಸಂಧಾನ ಮಾಡುವ ಅಗತ್ಯವಿಲ್ಲ. ಅವನು ಹಾಗೆಲ್ಲ ಮಾಡುವುದಿಲ್ಲ” ಎಂದು ಹೇಳಿದ್ದರಂತೆ. ಇದೀಗ ಚರಣ್ ಅವರ ಹತ್ಯೆಯ ಬಳಿಕ ಆಪ್ತರು ಈ ಹಿಂದಿನ ಘಟನೆಯನ್ನು ನೆನಪಿಸಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ಸ್ನೇಹಿತನ ಮೇಲಿನ ನಂಬಿಕೆಯಿಂದ ಕೊಲೆ ಸಂಚಿನ ಸುಳಿವನ್ನು ಅವರು ನಿರ್ಲಕ್ಷಿಸಿದ್ದರೇ ಎಂಬ ಚರ್ಚೆ ಶುರುವಾಗಿದೆ.
ಪತ್ನಿಯ ಗೋಳಾಟ ಕಂಡು ಧರ್ಮಸ್ಥಳಕ್ಕೆ ತೆರಳಿದ್ದ ಆರೋಪಿಗಳು?
ಚರಣ್ ಕೊಲೆ ಪ್ರಕರಣದ ಆರೋಪಿಗಳಾದ ಕಿರಣ್ ಮತ್ತು ಆಕಾಶ್, ಹತ್ಯೆಯ ಬಳಿಕ ಚರಣ್ ಅವರ ಪತ್ನಿಯ ಗೋಳಾಟವನ್ನು ಕಂಡು ಮರುಕಗೊಂಡಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಇಬ್ಬರೂ ಧರ್ಮಸ್ಥಳಕ್ಕೆ ತೆರಳಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ಧರ್ಮಸ್ಥಳದಲ್ಲಿದ್ದಾಗಲೇ ಯಲಹಂಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಪತ್ನಿಯ ಎದುರಲ್ಲೇ ಚರಣ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ
ನವೆಂಬರ್ 13ರಂದು ಯಲಹಂಕ ನ್ಯೂಟೌನ್ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಚರಣ್ ಗೌಡ ಅವರ ಕೊಲೆ ನಡೆದಿತ್ತು. ಚರಣ್ ಮತ್ತು ಅವರ ಪತ್ನಿ ಕಚೇರಿ ಬಳಿ ಬಂದಿದ್ದ ವೇಳೆ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಪತ್ನಿಯ ಎದುರಲ್ಲೇ ಚರಣ್ ಮೇಲೆ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು ಐವರನ್ನು ಬಂಧಿಸಿದ್ದಾರೆ. ಕೊಲೆಯ ಹಿಂದಿನ ಕಾರಣ, ಸುಪಾರಿ ಸಂಚು ಹಾಗೂ ಆರೋಪಿಗಳ ಪಾತ್ರದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.









