ಐಪಿಎಲ್ನಲ್ಲಿ ಹಳದಿ ಜೆರ್ಸಿ ತೊಟ್ಟು ಮೈದಾನಕ್ಕಿಳಿದು ಅಭಿಮಾನಿಗಳನ್ನು ರಂಜಿಸುತ್ತಿದ್ದ ಮಹೇಂದ್ರ ಸಿಂಗ್ ಧೋನಿ ಇನ್ನು ಮುಂದೆ ಆಟಗಾರನಾಗಿ ಅಲ್ಲ, ತಂಡದ ಮೆಂಟರ್ ಆಗಿ ಹೊಸ ಜವಾಬ್ದಾರಿ ನಿರ್ವಹಿಸಲಿದ್ದಾರೆ. 2027ರ ಐಪಿಎಲ್ನಿಂದ ಧೋನಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಫ್ರಾಂಚೈಸಿ ಅಧಿಕೃತವಾಗಿ ಘೋಷಿಸಿದೆ.
ಸುಮಾರು ಎರಡು ದಶಕಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದೊಂದಿಗೆ ಗುರುತಿಸಿಕೊಂಡಿರುವ ಧೋನಿ ಅವರ ಹೊಸ ಪಾತ್ರದ ಕುರಿತು ಫ್ರಾಂಚೈಸಿಯ ಮಾಲೀಕರು ಹಾಗೂ ಆಡಳಿತ ಮಂಡಳಿಯ ಪ್ರಮುಖರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಧೋನಿ ಕೇವಲ ಆಟಗಾರನಲ್ಲ, ಅವರು ಚೆನ್ನೈ ತಂಡದ ಗುರುತು ಮತ್ತು ಹೆಗ್ಗುರುತು ಎಂದು ಬಣ್ಣಿಸಿದ್ದಾರೆ.
ಧೋನಿಯನ್ನು ತಂಡಕ್ಕೆ ಕರೆತಂದ ನಿರ್ಧಾರ ನೆನಪಿಸಿಕೊಂಡ ಎನ್. ಶ್ರೀನಿವಾಸನ್
ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಎನ್. ಶ್ರೀನಿವಾಸನ್ ಅವರು ಧೋನಿ ಮತ್ತು ಫ್ರಾಂಚೈಸಿ ನಡುವಿನ ದೀರ್ಘಕಾಲದ ಸಂಬಂಧವನ್ನು ಸ್ಮರಿಸಿದ್ದಾರೆ. ಸುಮಾರು ಎರಡು ದಶಕಗಳಿಂದ ಧೋನಿ ಮತ್ತು ಸಿಎಸ್ಕೆ ತಂಡ ಒಟ್ಟಿಗೆ ಸಾಗಿದ್ದು, ಗೆಲುವು-ಸೋಲು ಸೇರಿದಂತೆ ಎಲ್ಲ ಸಂದರ್ಭಗಳಲ್ಲೂ ಪರಸ್ಪರ ಜೊತೆಯಾಗಿದ್ದೇವೆ ಎಂದು ಅವರು ಹೇಳಿದ್ದಾರೆ.
2008ರಲ್ಲಿ ಧೋನಿ ಅವರನ್ನು ಸಿಎಸ್ಕೆ ತಂಡಕ್ಕೆ ಸೇರಿಸಿಕೊಳ್ಳಲು ತಾವು ಒತ್ತಾಯಿಸಿದ್ದಾಗಿ ನೆನಪಿಸಿಕೊಂಡ ಶ್ರೀನಿವಾಸನ್, ಅದು ತಮ್ಮ ಅತ್ಯುತ್ತಮ ನಿರ್ಧಾರಗಳಲ್ಲಿ ಒಂದಾಗಿತ್ತು ಎಂದು ತಿಳಿಸಿದ್ದಾರೆ.
ಧೋನಿ ಅವರ ಕ್ರಿಕೆಟ್ ಸಾಧನೆಗಳಷ್ಟೇ ಅಲ್ಲದೆ, ಅವರ ವ್ಯಕ್ತಿತ್ವವೂ ಅವರನ್ನು ವಿಶೇಷವಾಗಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಟಗಾರನಾಗಿ ತಂಡಕ್ಕೆ ಅಪಾರ ಕೊಡುಗೆ ನೀಡಿರುವ ಧೋನಿ, ಮೆಂಟರ್ ಆಗಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿರುವುದು ಸಿಎಸ್ಕೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.









