ಶಿವಮೊಗ್ಗ: ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಭಾಗದಲ್ಲಿ ಇಬ್ಬರು ಕಾರ್ಮಿಕರ ಸಾವಿಗೆ ಕಾರಣವಾಗಿದ್ದ ಕಾಡಾನೆ ‘ಶೌರ್ಯ’ (32) ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ ಮೃತಪಟ್ಟಿದೆ. ಸೆರೆ ಕಾರ್ಯಾಚರಣೆ ಹಾಗೂ ನಂತರದ ತರಬೇತಿ ವೇಳೆ ಉಂಟಾಗಿದ್ದ ಗಾಯ ಉಲ್ಬಣಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಕ್ಟೋಬರ್ 1ರ ಬೆಳಗ್ಗೆ ಆನೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಫೆಬ್ರವರಿಯಲ್ಲಿ ಸೆರೆಸಿಕ್ಕಿದ್ದ ಕಾಡಾನೆ
2026ರ ಫೆಬ್ರವರಿಯಲ್ಲಿ ಬಾಳೆಹೊನ್ನೂರು ಭಾಗದಲ್ಲಿ ನಡೆದ ಕಾಡಾನೆ ದಾಳಿಗಳ ಬಳಿಕ ಅರಣ್ಯ ಇಲಾಖೆ ಈ ಆನೆಯನ್ನು ಸೆರೆಹಿಡಿಯಲು ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿತ್ತು. 7 ಪಳಗಿದ ಆನೆಗಳು ಹಾಗೂ ಸುಮಾರು 75 ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಕಾಡಾನೆಯನ್ನು ಸೆರೆಹಿಡಿದಿದ್ದರು.
ಬಳಿಕ ಆನೆಯನ್ನು ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ಸ್ಥಳಾಂತರಿಸಿ ‘ಶೌರ್ಯ’ ಎಂದು ಹೆಸರಿಡಲಾಗಿತ್ತು. ಮರದ ಕ್ರಾಲ್‌ನಲ್ಲಿ ಇರಿಸಿ ಪಳಗಿಸುವ ಪ್ರಕ್ರಿಯೆ ಆರಂಭಿಸಲಾಗಿದ್ದು, ಸುಮಾರು ಮೂರು ತಿಂಗಳ ಅವಧಿಯಲ್ಲಿ ಮಾವುತರು ಹಾಗೂ ಕಾವಾಡಿಗಳು ಶೌರ್ಯನನ್ನು ಪಳಗಿಸಿದ್ದರು.
ಗಾಯ ಉಲ್ಬಣಗೊಂಡು ಶೌರ್ಯ ಸಾವು
ಸೆರೆ ಕಾರ್ಯಾಚರಣೆ ಹಾಗೂ ತರಬೇತಿ ಸಂದರ್ಭದಲ್ಲಿ ಶೌರ್ಯನ ಕಾಲು ಮತ್ತು ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿದ್ದವು ಎನ್ನಲಾಗಿದೆ. ವಿಶೇಷವಾಗಿ ಸೆರೆಹಿಡಿಯುವ ಸಂದರ್ಭದಲ್ಲಿ ತೊಡೆಯ ಒಳಭಾಗದಲ್ಲಿ ಉಂಟಾಗಿದ್ದ ಗಾಯ ನಂತರ ಉಲ್ಬಣಗೊಂಡಿತ್ತು ಎಂದು ತಿಳಿದುಬಂದಿದೆ.
ಸೆಪ್ಟೆಂಬರ್ 30ರ ಸಂಜೆ ಶೌರ್ಯ ಆನೆ ಬಿಡಾರದಲ್ಲಿ ಕುಸಿದು ಬಿದ್ದಿದ್ದು, ತಕ್ಷಣ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅಕ್ಟೋಬರ್ 1ರ ಬೆಳಗ್ಗೆ ಮೃತಪಟ್ಟಿದೆ.
ಇಬ್ಬರು ಕಾರ್ಮಿಕರು ಆನೆ ದಾಳಿಗೆ ಬಲಿ
ಬಾಳೆಹೊನ್ನೂರು ಸಮೀಪದ ಹ್ಯಾರಂಬಿಪುರದಲ್ಲಿರುವ ಕಾಫಿ ತೋಟದಲ್ಲಿ ಹಾವೇರಿ ಮೂಲದ ಕಾರ್ಮಿಕ ಯಲ್ಲಪ್ಪ ಕಾಡಾನೆ ದಾಳಿಗೆ ಬಲಿಯಾಗಿದ್ದರು. ಇದಾದ ಒಂದು ವಾರದ ಬಳಿಕ ಅದೇ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಹೊಸಪೇಟೆ ಮೂಲದ ಬೋರಮ್ಮ (34) ಅವರ ಮೇಲೂ ಕಾಡಾನೆ ದಾಳಿ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಬೋರಮ್ಮ ಮೃತಪಟ್ಟಿದ್ದರು.
ಈ ಎರಡು ಘಟನೆಗಳ ಬಳಿಕ ಅರಣ್ಯ ಇಲಾಖೆ ಕಾಡಾನೆಯನ್ನು ಸೆರೆಹಿಡಿದು ಸಕ್ರೆಬೈಲು ಆನೆ ಬಿಡಾರಕ್ಕೆ ಸ್ಥಳಾಂತರಿಸಿತ್ತು. ಇದೀಗ ‘ಶೌರ್ಯ’ ಸಾವನ್ನಪ್ಪಿದ್ದು, ಸಾವಿಗೆ ನಿಖರ ಕಾರಣದ ಕುರಿತು ಸಂಬಂಧಪಟ್ಟ ಇಲಾಖೆಯಿಂದ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.



