ಬೆಂಗಳೂರು: ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ ಆಯೋಜಿಸಲಾಗುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಮುಖ್ಯಮಂತ್ರಿಗಳ ಕಚೇರಿ (CMO) ಸ್ಪಷ್ಟನೆ ನೀಡಿದೆ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಯಾವುದೇ ಸರ್ಕಾರಿಯೇತರ ಅಥವಾ ಖಾಸಗಿ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ ಹಾಗೂ ಅಂತಹ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡಿಲ್ಲ ಎಂದು ಸಿಎಂ ಕಚೇರಿ ತಿಳಿಸಿದೆ.
ಇದಕ್ಕೂ ಮುನ್ನ ನವೆಂಬರ್ 9ರ ಉರ್ದು ದಿನಾಚರಣೆ ಅಂಗವಾಗಿ ವಿಧಾನಸೌಧದ ಭವ್ಯ ಮೆಟ್ಟಿಲುಗಳಲ್ಲಿ ‘ಉರ್ದು ಹಬ್ಬ’ ನಡೆಸುವ ಬಗ್ಗೆ ಸಚಿವ ಯು.ಟಿ. ಖಾದರ್ ಹೇಳಿಕೆ ನೀಡಿದ್ದರು ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಉರ್ದು ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಕಲಾ ಪ್ರಕಾರಗಳನ್ನು ವಿವಿಧ ಸಮುದಾಯಗಳಿಗೆ ಪರಿಚಯಿಸುವುದು ಕಾರ್ಯಕ್ರಮದ ಉದ್ದೇಶ ಎಂದು ಅವರು ಹೇಳಿದ್ದರು.
‘ಯಾವುದೇ ಅನುಮತಿ ನೀಡಿಲ್ಲ’
ಆದರೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ನಡೆಯಲಿದೆ ಎಂಬ ವರದಿಗಳ ಕುರಿತು ಇದೀಗ ಮುಖ್ಯಮಂತ್ರಿಗಳ ಕಚೇರಿ ಸ್ಪಷ್ಟನೆ ನೀಡಿದೆ. ಮಾಧ್ಯಮಗಳಲ್ಲಿ ಖಾಸಗಿ ಕಾರ್ಯಕ್ರಮ ನಡೆಯಲಿದೆ ಎಂದು ಬಿಂಬಿಸಲಾಗುತ್ತಿರುವುದು ಸತ್ಯಕ್ಕೆ ದೂರವಾಗಿದ್ದು, ಸರ್ಕಾರ ಅಂತಹ ಯಾವುದೇ ಅನುಮತಿ ನೀಡಿಲ್ಲ ಎಂದು ತಿಳಿಸಲಾಗಿದೆ.
ವಿಧಾನಸೌಧದ ಮೆಟ್ಟಿಲುಗಳಲ್ಲಿ ಉರ್ದು ಹಬ್ಬ ನಡೆಸುವ ಪ್ರಸ್ತಾಪದ ವರದಿಗಳು ಹೊರಬೀಳುತ್ತಿದ್ದಂತೆಯೇ ಬಿಜೆಪಿ ಹಾಗೂ ಕೆಲವು ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಕೂಡ ಕಾರ್ಯಕ್ರಮದ ಸ್ಥಳದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಇದೀಗ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಖಾಸಗಿ ಅಥವಾ ಸರ್ಕಾರಿಯೇತರ ಉರ್ದು ಹಬ್ಬ ನಡೆಸಲು ಅನುಮತಿ ನೀಡಿಲ್ಲ ಎಂಬ ಸಿಎಂ ಕಚೇರಿಯ ಸ್ಪಷ್ಟನೆಯೊಂದಿಗೆ ವಿವಾದಕ್ಕೆ ಹೊಸ ತಿರುವು ಸಿಕ್ಕಿದೆ.



