HomeEntertainmentಸೈಲೆಂಟ್ ಆಗಿ ಬಂದ ‘ಪ್ರೇಮದ ಊರಲಿ’ ಈಗ ಪ್ಯಾನ್ ಇಂಡಿಯಾ ಹವಾ: ಕನ್ನಡದ ಗಡಿ ದಾಟಿದ...

ಸೈಲೆಂಟ್ ಆಗಿ ಬಂದ ‘ಪ್ರೇಮದ ಊರಲಿ’ ಈಗ ಪ್ಯಾನ್ ಇಂಡಿಯಾ ಹವಾ: ಕನ್ನಡದ ಗಡಿ ದಾಟಿದ ಸಿನಿಮಾ!

For Dai;y Updates Join Our whatsapp Group

ಸೈಲೆಂಟ್ ಆಗಿ ಥಿಯೇಟರ್‌ಗೆ ಬಂದ ಸಿನಿಮಾ… ಈಗ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸದ್ದು ಮಾಡ್ತಿದೆ. ಕೆಲವೇ ಚಿತ್ರಮಂದಿರಗಳಲ್ಲಿ ಶುರುವಾದ ಸಿನಿಮಾ ಈಗ ರಾಜ್ಯದಾದ್ಯಂತ ನೂರಾರು ಶೋಗಳನ್ನು ಪಡೆದುಕೊಂಡಿದೆ. ಕನ್ನಡದಲ್ಲಿ ಶುರುವಾದ ಈ ಚಿತ್ರದ ಕ್ರೇಜ್ ಈಗ ತೆಲುಗು ರಾಜ್ಯಗಳಿಗೂ ತಲುಪಿದೆ. ಅಷ್ಟೇ ಅಲ್ಲ, ಮುಂದಿನ ಟಾರ್ಗೆಟ್ ಹಿಂದಿ, ತಮಿಳು ಮತ್ತು ಮಲಯಾಳಂ! ಹೌದು… ನಾವು ಹೇಳ್ತಿರೋದು ‘ಪ್ರೇಮದ ಊರಲಿ’ ಸಿನಿಮಾ ಬಗ್ಗೆ.

ಎರಡು ವಾರಗಳ ಹಿಂದೆ ಸೀಮಿತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ‘ಪ್ರೇಮದ ಊರಲಿ’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಆರಂಭದಲ್ಲಿ ಕಡಿಮೆ ಶೋಗಳೊಂದಿಗೆ ಶುರುವಾದ ಸಿನಿಮಾ, ಬಾಯಿಮಾತಿನ ಪ್ರಚಾರದಿಂದ ನಿಧಾನವಾಗಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ. ಈಗ ರಾಜ್ಯದಾದ್ಯಂತ 500ಕ್ಕೂ ಹೆಚ್ಚು ಶೋಗಳು ಸಿಕ್ಕಿವೆ ಎನ್ನಲಾಗಿದ್ದು, ಹಲವು ಕಡೆ ಉತ್ತಮ ಪ್ರದರ್ಶನ ಕಾಣುತ್ತಿದೆ.

ಇದರ ಬೆನ್ನಲ್ಲೇ ‘ಪ್ರೇಮದ ಊರಲಿ’ ಕರ್ನಾಟಕದ ಗಡಿಯನ್ನೂ ದಾಟಿದೆ. ಅಕ್ಟೋಬರ್ 2ರಂದು ‘ಪ್ರೇಮನೇ ಊರಿಲೊ’ ಹೆಸರಿನಲ್ಲಿ ತೆಲುಗು ರಾಜ್ಯಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಅಲ್ಲಿಯೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎನ್ನಲಾಗುತ್ತಿದೆ. ಇದರ ನಡುವೆ ಚಿತ್ರದ ವಿತರಣೆಗೆ ದೊಡ್ಡ ಸಂಸ್ಥೆಗಳು ಕೈಜೋಡಿಸಿರುವುದು ಚಿತ್ರತಂಡದ ಪ್ಯಾನ್ ಇಂಡಿಯಾ ಕನಸಿಗೆ ಮತ್ತಷ್ಟು ಬಲ ನೀಡಿದೆ.

ಮೊದಲಿಗೆ ಪ್ರಶಾಂತ್ ಎಂಬುವರು ಚಿತ್ರದ ವಿತರಣೆಯನ್ನು ನೋಡಿಕೊಂಡಿದ್ದರು. ಬಳಿಕ ನಟ ರಂಗಾಯಣ ರಘು ಅವರ ನೆರವಿನಿಂದ ಜಯಣ್ಣ ಕಂಬೈನ್ಸ್ ಚಿತ್ರದ ವಿತರಣೆಗೆ ಕೈಜೋಡಿಸಿದೆ ಎನ್ನಲಾಗಿದೆ. ಇದರೊಂದಿಗೆ KRG ಕೂಡ ಚಿತ್ರದ ಬೆಂಬಲಕ್ಕೆ ನಿಂತಿದೆ. ಆದರೆ ಕಥೆ ಇಲ್ಲಿಗೇ ಮುಗಿಯೋದಿಲ್ಲ…

‘ಪ್ರೇಮದ ಊರಲಿ’ ಈಗ ಉತ್ತರ ಭಾರತದತ್ತ ಮುಖ ಮಾಡುತ್ತಿದೆ. ‘ಕೆಜಿಎಫ್’, ‘ಪುಷ್ಪ’ ಸೇರಿದಂತೆ ದಕ್ಷಿಣ ಭಾರತದ ಹಲವು ದೊಡ್ಡ ಸಿನಿಮಾಗಳನ್ನು ಉತ್ತರ ಭಾರತದಲ್ಲಿ ವಿತರಿಸಿರುವ ಖ್ಯಾತ ವಿತರಕ ಅನಿಲ್ ತಡಾನಿ ಅವರ ನೆರವಿನೊಂದಿಗೆ ‘ಪ್ರೇಮದ ಊರಲಿ’ ಸಿನಿಮಾವನ್ನು ಉತ್ತರ ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.

ಇದಕ್ಕಾಗಿ ಚಿತ್ರದ ಹಿಂದಿ ಡಬ್ಬಿಂಗ್ ಕೆಲಸಕ್ಕೂ ಚಾಲನೆ ಸಿಕ್ಕಿದೆ. ಜೊತೆಗೆ ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಸಿನಿಮಾ ಬಿಡುಗಡೆ ಮಾಡುವ ಯೋಜನೆ ರೂಪಿಸಲಾಗುತ್ತಿದೆ. ಅಂದರೆ ಕನ್ನಡದಲ್ಲಿ ಸೈಲೆಂಟ್ ಆಗಿ ಶುರುವಾದ ‘ಪ್ರೇಮದ ಊರಲಿ’ ಪಯಣ… ಈಗ ತೆಲುಗು ತಲುಪಿದೆ. ಅಲ್ಲಿಂದ ಹಿಂದಿ, ತಮಿಳು, ಮಲಯಾಳಂ ಭಾಷೆಗಳತ್ತ ಸಾಗುತ್ತಿದೆ.

ಈ ಬೆಳವಣಿಗೆ ನೋಡುತ್ತಿದ್ದಂತೆ ಕನ್ನಡಿಗರಿಗೆ ನೆನಪಾಗುತ್ತಿರುವುದು ‘ಕಾಂತಾರ’. 2022ರಲ್ಲಿ ‘ಕಾಂತಾರ’ ಕೂಡ ಮೊದಲಿಗೆ ಕನ್ನಡದಲ್ಲೇ ಬಿಡುಗಡೆಯಾಗಿತ್ತು. ಕನ್ನಡದಲ್ಲಿ ಪ್ರೇಕ್ಷಕರಿಂದ ದೊಡ್ಡ ಪ್ರತಿಕ್ರಿಯೆ ಸಿಕ್ಕ ಬಳಿಕ ಬೇರೆ ಭಾಷೆಗಳಿಗೆ ಡಬ್ ಆಗಿ ದೇಶದ ವಿವಿಧ ಭಾಗಗಳಲ್ಲಿ ಬಿಡುಗಡೆಯಾಯಿತು. ನಂತರ ‘ಕಾಂತಾರ’ ದೇಶಾದ್ಯಂತ ಗಮನ ಸೆಳೆದಿದ್ದು ಇತಿಹಾಸ.

ಈಗ ‘ಪ್ರೇಮದ ಊರಲಿ’ ಕೂಡ ಅದೇ ರೀತಿಯ ಪಯಣ ಆರಂಭಿಸಿದೆಯೇ ಎಂಬ ಕುತೂಹಲ ಮೂಡಿದೆ. ಆದರೆ ‘ಕಾಂತಾರ’ದ ಮಟ್ಟದ ಯಶಸ್ಸನ್ನು ಈ ಸಿನಿಮಾ ಸಾಧಿಸುತ್ತದೆಯೇ ಎಂಬುದನ್ನು ಮುಂದಿನ ದಿನಗಳೇ ಹೇಳಬೇಕು. ಸದ್ಯಕ್ಕಂತೂ ಸೀಮಿತ ಚಿತ್ರಮಂದಿರಗಳಿಂದ ಶುರುವಾದ ಕನ್ನಡ ಸಿನಿಮಾ, ಪ್ಯಾನ್ ಇಂಡಿಯಾ ಬಿಡುಗಡೆಗೆ ಸಿದ್ಧವಾಗುವ ಹಂತಕ್ಕೆ ಬಂದಿರುವುದೇ ಚಿತ್ರತಂಡಕ್ಕೆ ದೊಡ್ಡ ಬೆಳವಣಿಗೆ.

ಸೈಲೆಂಟ್ ಎಂಟ್ರಿ… ಶೋಗಳ ಸಂಖ್ಯೆ ಏರಿಕೆ… ತೆಲುಗಿಗೆ ಎಂಟ್ರಿ… ಈಗ ಪ್ಯಾನ್ ಇಂಡಿಯಾ ಪ್ಲ್ಯಾನ್! ‘ಪ್ರೇಮದ ಊರಲಿ’ಯ ಈ ಪಯಣ ಎಲ್ಲಿಯವರೆಗೆ ಸಾಗುತ್ತೆ? ಕನ್ನಡದ ಮತ್ತೊಂದು ಸಿನಿಮಾ ದೇಶಾದ್ಯಂತ ಸದ್ದು ಮಾಡುತ್ತಾ? ಅನ್ನೋ ಕುತೂಹಲಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img