ಆನೇಕಲ್: ತಾಲೂಕಿನ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಅನಧಿಕೃತ ಪಿಜಿಗಳು (Paying Guest) ಹಾಗೂ ನಿಯಮ ಉಲ್ಲಂಘಿಸಿ ನಿರ್ಮಿಸಲಾಗುತ್ತಿದ್ದ ಕಟ್ಟಡಗಳ ಮೇಲೆ ಪಂಚಾಯಿತಿ ಅಧಿಕಾರಿಗಳು ಭಾರಿ ದಾಳಿ ನಡೆಸಿದ್ದಾರೆ.
ಪ್ರತಿಷ್ಠಿತ ಅಲಯನ್ಸ್ ಕಾಲೇಜು ಸಮೀಪದ ಈಡನ್ ಗಾರ್ಡನ್, ನಕ್ಷತ್ರ ಹಾಗೂ ಸಾಯಿ ಬಡಾವಣೆಗಳಲ್ಲಿ ಐದಾರು ವರ್ಷಗಳಿಂದ ತಲೆಯೆತ್ತಿರುವ 28ಕ್ಕೂ ಹೆಚ್ಚು ಅನಧಿಕೃತ ಪಿಜಿಗಳ ವಿರುದ್ಧ ಪಿಡಿಒ ನಾಗರಾಜ್ ನೇತೃತ್ವದಲ್ಲಿ ಈ ಕಟ್ಟುನಿಟ್ಟಿನ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಗ್ರಾಮ ಪಂಚಾಯಿತಿ, ಯೋಜನಾ ಪ್ರಾಧಿಕಾರ, ಬೆಸ್ಕಾಂ ಹಾಗೂ ಅಗ್ನಿಶಾಮಕ ದಳದಿಂದ ಯಾವುದೇ ನಿರಾಕ್ಷೇಪಣಾ ಪತ್ರ (NOC) ಪಡೆಯದೆ ವಾಣಿಜ್ಯ ಉದ್ದೇಶಕ್ಕೆ ಈ ಕಟ್ಟಡಗಳನ್ನು ಬಳಸಲಾಗುತ್ತಿತ್ತು. ಜಿ+2 (G+2) ಅಂತಸ್ತಿಗೆ ಮಾತ್ರ ಅನುಮತಿ ಪಡೆದು, ನಿಯಮ ಗಾಳಿಗೆ ತೂರಿ 7 ರಿಂದ 8 ಅಂತಸ್ತಿನ ಬೃಹತ್ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಹೊರರಾಜ್ಯ ಮೂಲದ ಮಾಲೀಕರು ವಿದ್ಯಾರ್ಥಿಗಳಿಂದ ತಿಂಗಳಿಗೆ 10,000 ರೂ.ನಿಂದ 15,000 ರೂಪಾಯಿವರೆಗೆ ಭಾರಿ ಶುಲ್ಕ ವಸೂಲಿ ಮಾಡುತ್ತಿದ್ದು, ಜನವಸತಿ ಗೃಹಗಳೆಂದು ಸುಳ್ಳು ಹೇಳಿ ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿದ್ದರು.
ಅಲ್ಲದೆ, ಕೊಳಚೆ ನೀರು ಮತ್ತು ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ತ್ಯಾಜ್ಯ ನೀರು ಹರಿಯ ಬಿಡಲಾಗುತ್ತಿತ್ತು. ಭದ್ರತೆ ಹಾಗೂ ಸಿಸಿಟಿವಿ ಇಲ್ಲದೆ ಯುವತಿಯರು ಮತ್ತು ವಿದ್ಯಾರ್ಥಿಗಳ ಸುರಕ್ಷತೆಯೂ ಪ್ರಶ್ನಾರ್ಹವಾಗಿತ್ತು.
ಈ ಹಿನ್ನೆಲೆಯಲ್ಲಿ ಗ್ರಾ.ಪಂ. ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ನಿರ್ಮಾಣ ಹಂತದಲ್ಲಿದ್ದ 18 ಅನಧಿಕೃತ ಕಟ್ಟಡಗಳನ್ನು ಸೀಜ್ ಮಾಡಿದ್ದಾರೆ. ಈಗಾಗಲೇ ವಿದ್ಯಾರ್ಥಿಗಳು ವಾಸವಿರುವ 12 ಅಕ್ರಮ ಪಿಜಿಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಖಾಲಿ ಮಾಡಲು 1 ವಾರದ ಗಡುವು ನೀಡಲಾಗಿದೆ.
“ಕಾನೂನು ಉಲ್ಲಂಘನೆ ಕುರಿತು ಹತ್ತಾರು ಬಾರಿ ನೋಟಿಸ್ ನೀಡಿದ್ದರೂ ಮಾಲೀಕರು ಸ್ಪಂದಿಸಿರಲಿಲ್ಲ. ಬೆಸ್ಕಾಂಗೆ ಪತ್ರ ಬರೆದರೂ ಅಧಿಕಾರಿಗಳು ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿದ್ದಾರೆ. ಪೊಲೀಸರು ಕೂಡ ಎಫ್‌ಐಆರ್ ದಾಖಲಿಸುತ್ತಿರಲಿಲ್ಲ. ಹೀಗಾಗಿ ಸೀಜ್ ಕ್ರಮ ಕೈಗೊಳ್ಳಲಾಗಿದ್ದು, ನೀಡಿದ ಗಡುವು ಮುಗಿದ ನಂತರ ಸಂಪೂರ್ಣ ತೆರವು ಕಾರ್ಯಾಚರಣೆ ನಡೆಸಲಾಗುವುದು,” ಎಂದು ಪಿಡಿಒ ನಾಗರಾಜ್ ಸ್ಪಷ್ಟಪಡಿಸಿದ್ದಾರೆ.



