ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಫಾರ್ಮ್-7 ದುರ್ಬಳಕೆ ಕುರಿತು ಜಿಲ್ಲಾಧಿಕಾರಿಗಳು (DCs) ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಳಿಕ ವಿಶೇಷ ತನಿಖಾ ತಂಡ (SIT) ರಚನೆ ಮಾಡುವ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಫಾರ್ಮ್-7 ದುರ್ಬಳಕೆ ಸಂಬಂಧ ರಾಜ್ಯದಲ್ಲಿ ದೂರುಗಳು ದಾಖಲಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸದ್ಯ ಖಾಸಗಿಯಾಗಿ ದೂರುಗಳನ್ನು ನೀಡಲಾಗುತ್ತಿದೆ. ಜೀವಂತವಾಗಿರುವವರನ್ನೇ ಸತ್ತು ಹೋಗಿದ್ದಾರೆ ಎಂದು ಸುಳ್ಳು ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ. ಎಲ್ಲಾ ಕಡೆ ಬಿಜೆಪಿ ಕಾರ್ಯಕರ್ತರು ಈ ರೀತಿ ಅರ್ಜಿಗಳನ್ನು ನೀಡುತ್ತಿದ್ದು, ವಿಜಯಪುರದಲ್ಲಿ ಅನೇಕ ಜನರು ‘ನಾವು ಬದುಕಿದ್ದೇವೆ’ ಎಂದು ಸ್ವತಃ ಬಂದು ದೂರು ನೀಡಿದ್ದಾರೆ. ಕಾನೂನು ಉಲ್ಲಂಘನೆಯಾದಾಗ ದೂರುಗಳನ್ನು ಸ್ವೀಕರಿಸದೆ ಮತ್ತೆ ಏನು ಮಾಡಬೇಕು? ಬಿಜೆಪಿಯವರಿಗೆ ಸನ್ಮಾನ ಮಾಡಿ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕಾ ಎಂದು ಪ್ರಿಯಾಂಕ್ ಖರ್ಗೆ ತೀವ್ರವಾಗಿ ಕಿಡಿಕಾರಿದರು.
ಎಸ್ಐಟಿ (SIT) ರಚನೆ ಕುರಿತು ಮಾತನಾಡಿದ ಅವರು, “ಖಾಸಗಿ ದೂರುಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಡಿಸಿಗಳ ಮೂಲಕ ಚುನಾವಣಾ ಆಯೋಗಕ್ಕೆ ಅಧಿಕೃತ ದೂರು ಬರಲಿ, ಆ ಬಳಿಕ ಮುಂದಿನ ಕ್ರಮ ಕೈಗೊಳ್ಳೋಣ. ಇದೊಂದು ದೇಶವ್ಯಾಪಿ ನಡೆಯುತ್ತಿರುವ ದೊಡ್ಡ ಅಕ್ರಮವಾಗಿದೆ. ನಾವು ಕಾನೂನಿನ ಚೌಕಟ್ಟಿನಲ್ಲಿ ಮಾತ್ರ ಕೆಲಸ ಮಾಡಲು ಸಾಧ್ಯ, ಮನಸ್ಸಿಗೆ ಬಂದಂತೆ ಕೇಸ್ ಹಾಕಲು ಬರುವುದಿಲ್ಲ. ದೂರು ಬಂದಾಗ ಮಾತ್ರ ಪ್ರಕರಣ ದಾಖಲಿಸಲು ಸಾಧ್ಯ” ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಜಿಎಸ್ಟಿ (GST) ಸಭೆಗಾಗಿ ಸಿಎಂ ದೆಹಲಿಗೆ ತೆರಳುತ್ತಿರುವ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಕೃಷ್ಣ ಬೈರೇಗೌಡರನ್ನು ಕಳುಹಿಸುತ್ತಿದ್ದರು. ಈಗ ಸಿಎಂ ಡಿ.ಕೆ. ಶಿವಕುಮಾರ್ ಅವರೇ ಸ್ವತಃ ಹೋಗಿ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ, ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.



