ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ತಡರಾತ್ರಿ ಧಾರಾಕಾರ ಮಳೆಯಾಗಿದ್ದು, ನಗರದ ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಸಂಜೆ ಸುಮಾರು ಒಂದು ಗಂಟೆ ಕಾಲ ಮಳೆಯಾದ ಬಳಿಕ, ರಾತ್ರಿ 10 ಗಂಟೆಯ ನಂತರ ಮತ್ತೆ ಹಲವೆಡೆ ಭಾರಿ ಮಳೆ ಸುರಿದಿದೆ.
ಸತತ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಹಲವು ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ನದಿಯಂತೆ ಹರಿದಿದೆ. ಮಲ್ಲೇಶ್ವರಂ ಹಾಗೂ ಯಶವಂತಪುರ ಸಂಪರ್ಕಿಸುವ ರಸ್ತೆಯಲ್ಲಿ ಭಾರಿ ಪ್ರಮಾಣದ ನೀರು ನಿಂತ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆಯಾಯಿತು. ನೀರಿನಲ್ಲಿ ಹಲವು ಬೈಕ್ಗಳು ಕೆಟ್ಟು ನಿಂತಿದ್ದು, ಸವಾರರು ವಾಹನಗಳನ್ನು ತಳ್ಳಿಕೊಂಡು ತೆರಳಬೇಕಾಯಿತು.
ನಗರದ ಪ್ರಮುಖ ವಾಣಿಜ್ಯ ಪ್ರದೇಶವಾದ ಕೆ.ಆರ್. ಮಾರ್ಕೆಟ್ನ ರಸ್ತೆಯಲ್ಲೂ ನೀರು ನಿಂತು ಕೆರೆಯಂತಾಗಿತ್ತು. ಮೊಣಕಾಲುದ್ದ ನೀರು ನಿಂತಿದ್ದರಿಂದ ವ್ಯಾಪಾರಿಗಳು ಹಾಗೂ ವಾಹನ ಸವಾರರು ಪರದಾಡಿದರು. ವ್ಯಾಪಾರ ಮುಗಿಸಿ ಮನೆಗೆ ತೆರಳುತ್ತಿದ್ದವರು ನೀರಿನ ನಡುವೆ ಸಂಚರಿಸಲು ಹರಸಾಹಸ ಪಡಬೇಕಾಯಿತು.
ಇನ್ನು ಕೆ.ಆರ್.ಪುರಂ ರೈಲ್ವೆ ಅಂಡರ್ಪಾಸ್ ಕೂಡ ಸಂಪೂರ್ಣ ಜಲಾವೃತಗೊಂಡಿತ್ತು. ಅಪಾಯದ ನಡುವೆಯೂ ಅಂಡರ್ಪಾಸ್ಗೆ ನುಗ್ಗಿದ ಹಲವು ಬೈಕ್ಗಳು ನೀರಿನಲ್ಲೇ ಸಿಲುಕಿಕೊಂಡಿದ್ದು, ಸವಾರರು ಪರದಾಡಿದ ದೃಶ್ಯಗಳು ಕಂಡುಬಂದವು.
ಟ್ರಾಫಿಕ್ನಲ್ಲಿ ಸಿಲುಕಿದ ಶಾಸಕ:
ಭಾರಿ ಮಳೆಯಿಂದಾಗಿ ಚಂದಾಪುರ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಸುಮಾರು 2 ಕಿ.ಮೀ ಉದ್ದದ ಟ್ರಾಫಿಕ್ ಜಾಮ್ನಲ್ಲಿ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಕೂಡ ಸಿಲುಕಿಕೊಂಡಿದ್ದರು. ಸುಮಾರು 50 ನಿಮಿಷಗಳ ಕಾಲ ವಾಹನ ಮುಂದಕ್ಕೆ ಚಲಿಸದೆ ರಸ್ತೆಯಲ್ಲೇ ಕಾಯಬೇಕಾಯಿತು.
ಈ ಕುರಿತು ಶಾಸಕ ಎಸ್. ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಸಂಚಾರ ದಟ್ಟಣೆಯ ಬಗ್ಗೆ ಗಮನ ಸೆಳೆದಿದ್ದಾರೆ.
ಮಳೆಯ ಪರಿಣಾಮ ನಗರದ ಹಲವು ಭಾಗಗಳಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಬಿಬಿಎಂಪಿ ಹಾಗೂ ಸಂಚಾರ ಪೊಲೀಸರು ಸ್ಥಳಕ್ಕೆ ತೆರಳಿ ಮಳೆ ನೀರು ತೆರವುಗೊಳಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.



