ಬೆಂಗಳೂರು: ಕೆರೆ ಕಾಲುವೆಗೆ ಸೇತುವೆ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರಿನ ಬಸವನಗರ ಮುಖ್ಯರಸ್ತೆಯಲ್ಲಿ ವಾಹನ ಸಂಚಾರವನ್ನು 20 ದಿನಗಳ ಕಾಲ ನಿರ್ಬಂಧಿಸಲಾಗಿದೆ. ಕಾಮಗಾರಿ ನಡೆಯುವ ಅವಧಿಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಪರ್ಯಾಯ ರಸ್ತೆಗಳನ್ನು ಬಳಸುವಂತೆ ಸಂಚಾರ ಪೊಲೀಸರು ಸೂಚಿಸಿದ್ದಾರೆ.
ಬಸವನಗರ ಮುಖ್ಯರಸ್ತೆಯಲ್ಲಿ ಸಂಚಾರ ನಿರ್ಬಂಧ ಜಾರಿಯಾಗಿರುವುದರಿಂದ ಮಾರತ್ತಹಳ್ಳಿ ಹಾಗೂ ಎಚ್ಎಎಲ್ ಕಡೆಯಿಂದ ವಿಜ್ಞಾನನಗರಕ್ಕೆ ತೆರಳುವ ವಾಹನಗಳಿಗೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.
ಇನ್ನು ವಿಭೂತಿಪುರ ಮತ್ತು ಬಸವನಗರದಿಂದ ಕಗ್ಗದಾಸಪುರ ಹಾಗೂ ಮಲ್ಲೇಶಪಾಳ್ಯ ಕಡೆಗೆ ತೆರಳುವ ವಾಹನಗಳ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿದೆ. ಅದೇ ರೀತಿ ವಿಜ್ಞಾನನಗರ, ಕಗ್ಗದಾಸಪುರ ಮತ್ತು ಮಲ್ಲೇಶಪಾಳ್ಯದಿಂದ ಬಸವನಗರದತ್ತ ಬರುವ ವಾಹನಗಳಿಗೂ ಈ ನಿರ್ಬಂಧ ಅನ್ವಯಿಸಲಿದೆ.
ಬಿಇಎಂಎಲ್ ಕಡೆಯಿಂದ ಮಾರತ್ತಹಳ್ಳಿ ಹಾಗೂ ಎಚ್ಎಎಲ್ ಕಡೆಗೆ ಸಂಚರಿಸುವ ವಾಹನ ಸವಾರರಿಗೆ ಈ ನಿರ್ಬಂಧದಿಂದ ತೊಂದರೆಯಾಗುವ ಸಾಧ್ಯತೆಯಿದೆ. ಹೀಗಾಗಿ ವಾಹನ ಸವಾರರು ಪ್ರಯಾಣ ಆರಂಭಿಸುವ ಮುನ್ನ ಪರ್ಯಾಯ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ.
ಸಂಚಾರ ದಟ್ಟಣೆ ಉಂಟಾಗದಂತೆ ಎಚ್ಎಎಲ್ ಸಂಚಾರ ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಾರ್ವಜನಿಕರು ಸಂಚಾರ ನಿರ್ಬಂಧಗಳನ್ನು ಪಾಲಿಸಿ, ಪೊಲೀಸರ ಸೂಚನೆಗಳಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.



