ಮುಂಬೈ: ಮಹಾರಾಷ್ಟ್ರದ ಧುಳೆ ಜಿಲ್ಲೆಯ ತಾಪಿ ನದಿಯ ತಳದಲ್ಲಿ ನವದಂಪತಿಯ ಮೃತದೇಹಗಳು ಪತ್ತೆಯಾಗಿದ್ದು, ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮೃತರ ಕಾಲುಗಳಿಗೆ ಕಬ್ಬಿಣದ ಸರಪಳಿ ಬಿಗಿದು, ಅದಕ್ಕೆ ಬೀಗ ಹಾಕಿರುವುದು ಕಂಡುಬಂದಿದೆ. ಹೀಗಾಗಿ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಶಂಕೆ ವ್ಯಕ್ತವಾಗಿದೆ.
ಮೃತರನ್ನು ಜಲಗಾಂವ್ ಜಿಲ್ಲೆಯ ಅಮಲ್ನೇರ್ ತಾಲೂಕಿನ ಶ್ಯಾಮ್ ಹರಿ ಪಾಟೀಲ್ ಮತ್ತು ಸಪ್ನಾ ಪಾಟೀಲ್ ಎಂದು ಗುರುತಿಸಲಾಗಿದೆ. ಇಬ್ಬರೂ ಕೆಲವು ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದರು ಎಂದು ತಿಳಿದುಬಂದಿದೆ.
ತಾಪಿ ನದಿಯ ತಳದಲ್ಲಿ ಎರಡು ಮೃತದೇಹಗಳು ಪತ್ತೆಯಾಗಿದ್ದು, ಅವುಗಳ ಕಾಲಿಗೆ ಸರಪಳಿ ಬಿಗಿದು ಬೀಗ ಹಾಕಿರುವುದು ಪೊಲೀಸರ ತನಿಖೆಗೆ ಪ್ರಮುಖ ಸುಳಿವಾಗಿದೆ. ಈ ಅಸಹಜ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿರುವುದರಿಂದ ಸಾವಿನ ಹಿಂದಿನ ಕಾರಣದ ಬಗ್ಗೆ ಹಲವು ಪ್ರಶ್ನೆಗಳು ಮೂಡಿವೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆತ್ಮಹತ್ಯೆ ಅಥವಾ ಕೊಲೆ ಸೇರಿದಂತೆ ಎಲ್ಲ ಆಯಾಮಗಳಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನವದಂಪತಿಯ ಸಾವಿನ ನಿಖರ ಕಾರಣ ತನಿಖೆಯಿಂದ ತಿಳಿದುಬರಬೇಕಿದೆ.



