ಬೆಂಗಳೂರು: ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೋಮನಹಳ್ಳಿ ಟೋಲ್ ಸಮೀಪ ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ಯುವಕನನ್ನು ಕಗ್ಗಲಿಪುರ ನಿವಾಸಿ ಜಫ್ರೂ ಎಂದು ಗುರುತಿಸಲಾಗಿದೆ. ಅವರು ಸೋಮನಹಳ್ಳಿ ಗೇಟ್ನಲ್ಲಿರುವ ಎಟಿಎಂಗೆ ತೆರಳಿ ಹಣ ಪಡೆದುಕೊಂಡು ವಾಪಸ್ ಬರುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಬೆಂಗಳೂರಿನ ಕಡೆಗೆ ಹೋಗಲು ಯು-ಟರ್ನ್ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಆಕ್ಟಿವಾ ಹೋಂಡಾ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಅಪಘಾತದ ರಭಸಕ್ಕೆ ಬೈಕ್ ಸವಾರನ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅಪಘಾತದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.



