ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆ ಸಮೀಪದ ಇಚ್ಚಂಗೂರು–ವಡ್ಡರಪಾಳ್ಯ ರಸ್ತೆಯಲ್ಲಿರುವ ಲೇಕ್ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ನಲ್ಲಿ ಬೆಳ್ಳಂಬೆಳಗ್ಗೆ ಭಾರೀ ಸ್ಫೋಟ ಸಂಭವಿಸಿದ್ದು, ಮೂವರು ಕಾರ್ಮಿಕರು ಗಾಯಗೊಂಡಿದ್ದಾರೆ.
ಅವರಲ್ಲಿ ಓರ್ವನ ಸ್ಥಿತಿ ಚಿಂತಾಜನಕವಾಗಿದೆ.
ಕಾರ್ಖಾನೆಯಲ್ಲಿ ಕೆಮಿಕಲ್ ಮಿಶ್ರಣ ಮಾಡುವ ವೇಳೆ ರಿಯಾಕ್ಟರ್ ಏಕಾಏಕಿ ಸ್ಫೋಟಗೊಂಡಿದೆ ಎನ್ನಲಾಗಿದೆ. ಸ್ಫೋಟದ ತೀವ್ರತೆಗೆ ಕಾರ್ಖಾನೆಯ ಕಿಟಕಿ, ಬಾಗಿಲುಗಳು ಹಾನಿಗೊಳಗಾಗಿದ್ದು, ಒಳಗಿದ್ದ ವಸ್ತುಗಳು ಛಿದ್ರಗೊಂಡಿವೆ. ಸ್ಫೋಟದ ಭಾರೀ ಸದ್ದು ಕೇಳಿ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.
ಘಟನೆಯಲ್ಲಿ ಅಸ್ಸಾಂ ಮೂಲದ ಫೀರ್ ಮೊಹಮ್ಮದ್, ತಮಿಳುನಾಡು ಮೂಲದ ವಿನೀತ್ ಹಾಗೂ ವರುಣ್ ಟಿ. ಜಯನ್ ಗಾಯಗೊಂಡಿದ್ದಾರೆ. ಕೆಮಿಕಲ್ನಿಂದ ಸುಟ್ಟ ಗಾಯಗಳಾಗಿರುವ ಕಾರ್ಮಿಕರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಷಯ ತಿಳಿಯುತ್ತಿದ್ದಂತೆ ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಇನ್ಸ್ಪೆಕ್ಟರ್ ಮಂಜುನಾಥ್ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕೂಡ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸ್ಫೋಟದ ಬಳಿಕ ಕಾರ್ಖಾನೆಯ ಸುತ್ತಮುತ್ತ ಕೆಮಿಕಲ್ನ ದುರ್ವಾಸನೆ ಹರಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಇನ್ನು, ಈ ಕಾರ್ಖಾನೆಯಲ್ಲಿ ಈ ಹಿಂದೆಯೂ ಹಲವು ಬಾರಿ ಸ್ಫೋಟ ಹಾಗೂ ಅವಘಡಗಳು ಸಂಭವಿಸಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಾರ್ಖಾನೆಯಿಂದ ನಿರಂತರ ಸಮಸ್ಯೆಗಳು ಎದುರಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅವರು, ಘಟಕವನ್ನು ಶಾಶ್ವತವಾಗಿ ಮುಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ರಿಯಾಕ್ಟರ್ಗೆ ಸಮರ್ಪಕ ಅರ್ಥಿಂಗ್ ವ್ಯವಸ್ಥೆ ಇಲ್ಲದಿರುವುದು ಹಾಗೂ ಕಾರ್ಮಿಕರಿಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಒದಗಿಸದಿರುವುದೇ ಸ್ಫೋಟಕ್ಕೆ ಕಾರಣವಾಗಿರಬಹುದು ಎಂಬ ಆರೋಪಗಳು ಕೇಳಿಬಂದಿವೆ. ಆದರೆ, ಸ್ಫೋಟಕ್ಕೆ ನಿಖರ ಕಾರಣ ಏನು ಎಂಬುದು ತನಿಖೆಯಿಂದಲೇ ತಿಳಿಯಬೇಕಿದೆ.
ಇಷ್ಟೊಂದು ಗಂಭೀರ ಘಟನೆ ನಡೆದಿದ್ದರೂ, ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂಬ ರೀತಿಯಲ್ಲಿ ಕಾರ್ಖಾನೆ ಆಡಳಿತ ಮಂಡಳಿ ಪ್ರತಿಕ್ರಿಯಿಸಿದೆ ಎಂದು ಆರೋಪಿಸಲಾಗಿದೆ. ಕಾರ್ಮಿಕರ ಸುರಕ್ಷತೆ ಮತ್ತು ಕೈಗಾರಿಕಾ ಘಟಕಗಳಲ್ಲಿನ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಈ ಘಟನೆ ಮತ್ತೊಮ್ಮೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.



