HomeGadag Newsಆಸ್ತಿ ವಿವಾದಕ್ಕೆ ರಕ್ತಪಾತ? ಲಕ್ಕುಂಡಿ ಕೊಲೆ ಪ್ರಕರಣದಲ್ಲಿ ತಂದೆ-ಮಗ ಅರೆಸ್ಟ್

ಆಸ್ತಿ ವಿವಾದಕ್ಕೆ ರಕ್ತಪಾತ? ಲಕ್ಕುಂಡಿ ಕೊಲೆ ಪ್ರಕರಣದಲ್ಲಿ ತಂದೆ-ಮಗ ಅರೆಸ್ಟ್

ಗದಗ: ಜಿಲ್ಲೆಯ ಲಕ್ಕುಂಡಿ ಗ್ರಾಮದ ರೈತ ಬಸವಣ್ಣಪ್ಪ ಮಾಡಲಗೇರಿ (65) ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಕೊಲೆಯ ಆರೋಪದ ಮೇಲೆ ಮೃತರ ಸಹೋದರ ಈರಪ್ಪ ಮಾಡಲಗೇರಿ (60) ಹಾಗೂ ಆತನ ಪುತ್ರ ಪ್ರಶಾಂತ ಮಾಡಲಗೇರಿ (22) ಅವರನ್ನು ಗದಗ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.

ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಮಿಥುನ್ ಎಚ್.ಎನ್. ಪ್ರಕರಣದ ವಿವರಗಳನ್ನು ತಿಳಿಸಿದರು.

ಅಕ್ಟೋಬರ್ 9ರಂದು ರಾತ್ರಿ 7.30ರಿಂದ 10 ಗಂಟೆಯ ನಡುವಿನ ಅವಧಿಯಲ್ಲಿ ಲಕ್ಕುಂಡಿ-ಕದಾಂಪುರ ರಸ್ತೆ ಸಮೀಪ ಬಸವಣ್ಣಪ್ಪ ಅವರ ಕುತ್ತಿಗೆ ಮತ್ತು ತಲೆಗೆ ಆಯುಧದಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಮೃತರ ಪುತ್ರ ಚಂದನಕುಮಾರ ಮಾಡಲಗೇರಿ ನೀಡಿದ ದೂರಿನ ಮೇರೆಗೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ನಾಲ್ಕು ಎಕರೆ ಜಮೀನಿನ ವಿವಾದವೇ ಕೊಲೆಗೆ ಕಾರಣವಾಗಿರಬಹುದು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಜಮೀನಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ನಡೆದಿದ್ದು, ಇತ್ತೀಚೆಗೆ ಜಮೀನು ಬಸವಣ್ಣಪ್ಪ ಅವರ ಹೆಸರಿಗೆ ಸೇರಬೇಕೆಂದು ಆದೇಶವಾಗಿತ್ತು ಎನ್ನಲಾಗಿದೆ. ಇದರಿಂದ ಆರೋಪಿತರು ಅಸಮಾಧಾನಗೊಂಡಿದ್ದರು ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.

ಇದಲ್ಲದೆ, ಜಂತ್ಲಿ-ಶಿರೂರು ರಸ್ತೆಯಲ್ಲಿರುವ 14 ಎಕರೆ ಜಮೀನಿನ ವಿಚಾರವೂ ವಿವಾದಕ್ಕೆ ಕಾರಣವಾಗಿತ್ತು. ಆಸ್ತಿಯಲ್ಲಿ ಪಾಲು ಸಿಗದಿರಲು ಬಸವಣ್ಣಪ್ಪ ಅವರೇ ಕಾರಣ ಎಂದು ಆರೋಪಿತರು ಭಾವಿಸಿದ್ದರು ಎನ್ನಲಾಗಿದೆ.

ಈರಪ್ಪನ ಪ್ರಚೋದನೆಯ ಮೇರೆಗೆ ಪ್ರಶಾಂತ ಕುಡಗೋಲಿನಿಂದ ಬಸವಣ್ಣಪ್ಪ ಅವರ ಕುತ್ತಿಗೆ ಮತ್ತು ತಲೆಗೆ ಹಲ್ಲೆ ನಡೆಸಿ, ಬಳಿಕ ಕಲ್ಲಿನಿಂದಲೂ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಎಸ್ಪಿ ತಿಳಿಸಿದರು.

ಮೂರು ದಿನದಲ್ಲೇ ಆರೋಪಿಗಳ ಪತ್ತೆ:

ಡಿಎಸ್ಪಿ ಮುರ್ತುಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸಿದ್ದರಾಮೇಶ್ವರ ಗಡೇದ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ತಾಂತ್ರಿಕ ಮಾಹಿತಿ ಹಾಗೂ ವೈಜ್ಞಾನಿಕ ವಿಧಾನಗಳ ಮೂಲಕ ತನಿಖೆ ನಡೆಸಿದ ಪೊಲೀಸರು, ಅಕ್ಟೋಬರ್ 12ರಂದು ರಾತ್ರಿ ಉಜಿರೆಯಲ್ಲಿ ಪ್ರಶಾಂತನನ್ನು ವಶಕ್ಕೆ ಪಡೆದರು. ಬಳಿಕ ಲಕ್ಕುಂಡಿಯಲ್ಲಿ ಈರಪ್ಪನನ್ನು ವಶಕ್ಕೆ ಪಡೆದು ಅಕ್ಟೋಬರ್ 13ರಂದು ಬಂಧಿಸಿದರು.

ಕೊಲೆಗೆ ಬಳಸಿದ ಮೋಟಾರ್ ಸೈಕಲ್ ಹಾಗೂ ಆಯುಧಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಬಂಧಿತ ತಂದೆ-ಮಗನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣ ದಾಖಲಾದ ಮೂರು ದಿನಗಳಲ್ಲೇ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ ಪೊಲೀಸ್ ತಂಡದ ಕಾರ್ಯವನ್ನು ಎಸ್ಪಿ ಮಿಥುನ್ ಎಚ್.ಎನ್. ಶ್ಲಾಘಿಸಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img