ಗದಗ: ಜಮೀನಿನ ಶೆಡ್ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಹೆಸ್ಕಾಂ ಸೆಕ್ಷನ್ ಆಫೀಸರ್ ಹಾಗೂ ಅವರ ಪರವಾಗಿ ಹಣ ಸ್ವೀಕರಿಸುತ್ತಿದ್ದ ವಿದ್ಯುತ್ ಗುತ್ತಿಗೆದಾರನನ್ನು ಗದಗ ಲೋಕಾಯುಕ್ತ ಪೊಲೀಸರು ಬಲೆಗೆ ಕೆಡವಿದ್ದಾರೆ.
ಕೊತಬಾಳ ಗ್ರಾಮದ ಮೇಘಯ್ಯ ಶೇಖರಯ್ಯ ಹಿರೇಮಠ ಅವರು ತಮ್ಮ ಜಮೀನಿನಲ್ಲಿ ಪಶುಸಂಗೋಪನೆಗಾಗಿ ಶೆಡ್ ನಿರ್ಮಿಸಿಕೊಂಡಿದ್ದರು. ಅದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕೆಆರ್ಇಎಚ್ ಕಚೇರಿಯ ಸೆಕ್ಷನ್ ಆಫೀಸರ್ ಮಾಬುಸಾಬ ಮಕ್ತುಮಸಾಬ ಅಡಿನ ಹಾಗೂ ವಿದ್ಯುತ್ ಗುತ್ತಿಗೆದಾರ ಮಹಾದೇವ ಸಜ್ಜನರ ಅವರು ₹20 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಬಳಿಕ ಮಾತುಕತೆಯಲ್ಲಿ ₹15 ಸಾವಿರ ನೀಡಲು ಒಪ್ಪಂದವಾಗಿತ್ತು.
ಅಕ್ಟೋಬರ್ 1ರಂದು ದೂರುದಾರರು ಗುತ್ತಿಗೆದಾರನ ಆನ್ಲೈನ್ ಪಾವತಿ ಸಂಖ್ಯೆಗೆ ₹5 ಸಾವಿರ ಪಾವತಿಸಿದ್ದರು. ಉಳಿದ ₹10 ಸಾವಿರ ನೀಡದಿದ್ದರೆ ವಿದ್ಯುತ್ ಸಂಪರ್ಕ ಕಲ್ಪಿಸುವುದಿಲ್ಲ ಎಂದು ಒತ್ತಾಯಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಲಂಚದ ಬೇಡಿಕೆ ಮತ್ತು ಒತ್ತಡದಿಂದ ಬೇಸತ್ತ ದೂರುದಾರರು ಅಕ್ಟೋಬರ್ 13ರಂದು ಗದಗ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಕ್ಟೋಬರ್ 14ರಂದು ಬಲೆ ಬೀಸಿದರು. ಸೆಕ್ಷನ್ ಆಫೀಸರ್ ಸೂಚನೆಯಂತೆ ಗುತ್ತಿಗೆದಾರ ಮಹಾದೇವ ಸಜ್ಜನರ ಅವರು ದೂರುದಾರರಿಂದ ಬಾಕಿ ಇದ್ದ ₹10 ಸಾವಿರ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಹಿಡಿದಿದ್ದಾರೆ. ಬಳಿಕ ಸೆಕ್ಷನ್ ಆಫೀಸರ್ ಮಾಬುಸಾಬ ಅಡಿನ ಅವರನ್ನೂ ವಶಕ್ಕೆ ಪಡೆಯಲಾಗಿದೆ.
ಈ ಸಂಬಂಧ ಗದಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

