ಬೆಂಗಳೂರು: ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ವಿವಾದ ತೀವ್ರಗೊಂಡಿರುವ ಬೆನ್ನಲ್ಲೇ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಬೆಂಗಳೂರಿನಲ್ಲೇ ಸ್ಟಿಂಗ್ ಆಪರೇಷನ್ ಮತ್ತು ಸಿಡಿ ತಯಾರಿಸುವ ವ್ಯವಸ್ಥಿತ ಜಾಲ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿರುವ ಅವರು, ಈ ಪ್ರಕರಣದ ಕುರಿತು ಸಮಗ್ರ ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಬಳಿ ನಡೆಸಿದ ಧರಣಿಗೆ ನೈತಿಕ ಬೆಂಬಲ ಸೂಚಿಸಲು ಆಗಮಿಸಿದ ಯತ್ನಾಳ್, ಮಾಧ್ಯಮಗಳೊಂದಿಗೆ ಮಾತನಾಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕೆಲವು ಭ್ರಷ್ಟ ರಾಜಕಾರಣಿಗಳ ನೇತೃತ್ವದಲ್ಲಿ ಬ್ಲ್ಯಾಕ್ಮೇಲ್ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಸ್ಟಿಂಗ್ ಆಪರೇಷನ್ ನಡೆಸಿ ಹಣ ಗಳಿಸುವುದು ಹಾಗೂ ವ್ಯಕ್ತಿಗಳನ್ನು ಬೆದರಿಸುವ ಕೆಲಸ ನಡೆಯುತ್ತಿದೆ ಎಂದು ದೂರಿದರು.
‘ಕರ್ನಾಟಕದಲ್ಲಿ ಸ್ಟಿಂಗ್ ಆಪರೇಷನ್ ಮತ್ತು ಸಿಡಿ ತಯಾರಿಸುವ ದೊಡ್ಡ ಕಾರ್ಖಾನೆಯೇ ಇದೆ. ಅಧಿಕಾರಿಗಳು, ಮಠಾಧೀಶರು ಹಾಗೂ ರಾಜಕಾರಣಿಗಳನ್ನು ಗುರಿಯಾಗಿಸಲು ಪ್ರತ್ಯೇಕ ಐಟಿ ತಂಡ ಕಾರ್ಯನಿರ್ವಹಿಸುತ್ತಿದೆ. ಈ ಸಿಡಿ ಫ್ಯಾಕ್ಟರಿ ಬೇರೆಲ್ಲೂ ಇಲ್ಲ, ಬೆಂಗಳೂರಿನಲ್ಲೇ ಇದೆ’ ಎಂದು ಯತ್ನಾಳ್ ಆರೋಪಿಸಿದರು.
ಸ್ಟಿಂಗ್ ಆಪರೇಷನ್ ಹಿಂದಿನ ನಿಜವಾದ ಸೂತ್ರಧಾರಿಗಳನ್ನು ಪತ್ತೆಹಚ್ಚುವ ಬದಲು ಜೆಡಿಎಸ್ ಕಾರ್ಯಕರ್ತರನ್ನು ಬಂಧಿಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಅವರು, ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿಲ್ಲ ಎಂದು ದೂರಿದರು.
‘ಅಸಲಿ ತಪ್ಪಿತಸ್ಥರನ್ನು ಬಂಧಿಸಬೇಕು. ಸಿಡಿ ತಯಾರಿಕೆ ಮತ್ತು ಬ್ಲ್ಯಾಕ್ಮೇಲ್ ಆರೋಪಗಳ ಹಿಂದಿರುವ ವ್ಯಕ್ತಿಗಳನ್ನು ಪತ್ತೆಹಚ್ಚಬೇಕು. ಈ ಇಡೀ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಸಮಗ್ರ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.
ಇದೇ ವೇಳೆ ಕುಮಾರಸ್ವಾಮಿ ಅವರ ಹೋರಾಟಕ್ಕೆ ಸಂಪೂರ್ಣ ನೈತಿಕ ಬೆಂಬಲವಿದೆ ಎಂದು ತಿಳಿಸಿದ ಯತ್ನಾಳ್, ರಾಜ್ಯ ಸರ್ಕಾರದ ಹಗರಣಗಳನ್ನು ಕುಮಾರಸ್ವಾಮಿ ಒಂದೊಂದಾಗಿ ಬಯಲಿಗೆಳೆಯುತ್ತಿದ್ದಾರೆ ಎಂದು ಹೇಳಿದರು.
‘ನಾವು ಯಾವುದೇ ತಪ್ಪು ಕೆಲಸ ಮಾಡಿಲ್ಲ. ಯಾರ ಬೆದರಿಕೆಗೂ ಹೆದರುವ ಅಗತ್ಯವಿಲ್ಲ. ಬೀದಿ ರೌಡಿಗಳಿಗೆ ಬೆದರಿಕೆ ಹಾಕಿದಂತೆ ನಮ್ಮನ್ನು ಬೆದರಿಸಲು ಬರಬೇಡಿ. ನಾವಾಗಲಿ, ಕುಮಾರಸ್ವಾಮಿ ಅವರಾಗಲಿ ಹೆದರುವವರಲ್ಲ’ ಎಂದು ಸವಾಲು ಹಾಕಿದರು.
ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಯತ್ನಾಳ್, ಸರ್ಕಾರದ ಪ್ರಮುಖರು ಬೇಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರನ್ನೂ ತರಾಟೆಗೆ ತೆಗೆದುಕೊಂಡ ಅವರು, ‘ಎಲ್ಲರನ್ನೂ ಜೈಲಿಗೆ ಹಾಕುತ್ತೀರಾ? ಎಷ್ಟು ಜನರನ್ನು ಜೈಲಿಗೆ ಕಳುಹಿಸುತ್ತೀರಿ ನೋಡೋಣ. ಅಧಿಕಾರದ ಮದದಲ್ಲಿ ಮಾತನಾಡಬೇಡಿ’ ಎಂದು ಎಚ್ಚರಿಸಿದರು.



