ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ಈರುಳ್ಳಿ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಉರುಳಿ ಬಿದ್ದಿದೆ. ಅಪಘಾತದಲ್ಲಿ ಲಾರಿ ಚಾಲಕ ಹಾಗೂ ಕ್ಲೀನರ್ ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಅಪಘಾತದ ಬಳಿಕ ಸ್ಥಳದಲ್ಲಿ ನಡೆದ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಪಗಲ್ ಗ್ರಾಮದ ಸಮೀಪದ ತಿರುವಿನಲ್ಲಿ ಈರುಳ್ಳಿ ತುಂಬಿಕೊಂಡು ಸಾಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತದ ರಭಸಕ್ಕೆ ಲಾರಿಯಲ್ಲಿದ್ದ ಈರುಳ್ಳಿ ಚೀಲಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಘಟನೆಯಲ್ಲಿ ಗಾಯಗೊಂಡ ಚಾಲಕ ಮತ್ತು ಕ್ಲೀನರ್ ನೆರವಿಗಾಗಿ ಪರದಾಡುತ್ತಿದ್ದರೆ, ಸ್ಥಳಕ್ಕೆ ಬಂದ ಕೆಲವರು ಈರುಳ್ಳಿ ಚೀಲಗಳನ್ನು ಹೊತ್ತೊಯ್ಯಲು ಮುಗಿಬಿದ್ದಿದ್ದಾರೆ ಎನ್ನಲಾಗಿದೆ.
ಗಾಯಾಳುಗಳ ನೆರವಿಗೆ ಧಾವಿಸದೆ ಈರುಳ್ಳಿ ದೋಚಿದ ಜನರು!
ಲಾರಿ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜನರು ದೌಡಾಯಿಸಿದ್ದಾರೆ. ಆದರೆ, ಗಾಯಗೊಂಡ ಚಾಲಕ ಮತ್ತು ಕ್ಲೀನರ್ಗೆ ಸಹಾಯ ಮಾಡುವ ಬದಲು ಲಾರಿಯಲ್ಲಿದ್ದ ಈರುಳ್ಳಿ ಚೀಲಗಳನ್ನು ತೆಗೆದುಕೊಂಡು ಹೋಗಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕೆಲವರು ಚೀಲಗಳಲ್ಲಿ ಈರುಳ್ಳಿ ತುಂಬಿಕೊಂಡು ಹೋಗಿದ್ದರೆ, ಇನ್ನೂ ಕೆಲವರು ಲಾರಿಯಲ್ಲಿದ್ದ ಈರುಳ್ಳಿ ಚೀಲಗಳನ್ನೇ ಹೊತ್ತೊಯ್ದಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುಗಳ ರಕ್ಷಣೆಗೆ ಆದ್ಯತೆ ನೀಡದ ಜನರ ವರ್ತನೆ ತೀವ್ರ ಟೀಕೆಗೆ ಗುರಿಯಾಗಿದೆ.
20 ನಿಮಿಷದಲ್ಲೇ ಸಂಪೂರ್ಣ ಈರುಳ್ಳಿ ಲೋಡ್ ಖಾಲಿ!
ಅಪಘಾತ ಸಂಭವಿಸಿದ ಕೇವಲ 15ರಿಂದ 20 ನಿಮಿಷಗಳಲ್ಲೇ ಲಾರಿಯಲ್ಲಿದ್ದ ಬಹುತೇಕ ಈರುಳ್ಳಿ ಚೀಲಗಳನ್ನು ಜನರು ಹೊತ್ತೊಯ್ದಿದ್ದಾರೆ ಎನ್ನಲಾಗಿದೆ. ದೊಡ್ಡ ಲಾರಿಯಲ್ಲಿ ಸಾಗಿಸಲಾಗುತ್ತಿದ್ದ ಈರುಳ್ಳಿ ಕ್ಷಣಾರ್ಧದಲ್ಲೇ ಖಾಲಿಯಾಗಿರುವುದು ಅಚ್ಚರಿ ಮೂಡಿಸಿದೆ.
ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗುವ ಬದಲು ಈರುಳ್ಳಿ ಸಂಗ್ರಹಿಸಲು ಜನರು ಮುಂದಾಗಿರುವುದು ಮಾನವೀಯತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸ್ಥಳಕ್ಕೆ ಮಾನ್ವಿ ಪೊಲೀಸರ ಭೇಟಿ
ಈ ಘಟನೆ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾರಿ ಅಪಘಾತಕ್ಕೆ ಕಾರಣವೇನು ಹಾಗೂ ಈರುಳ್ಳಿ ಚೀಲಗಳನ್ನು ಹೊತ್ತೊಯ್ದವರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.



