ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿಗಳಿಗೆ ಪೊಲೀಸರು ಖೆಡ್ಡಾ ತೋಡಿದ್ದಾರೆ. ಮುಂಬೈನಲ್ಲಿ ಗುಂಡಿನ ದಾಳಿ ನಡೆಸಿ ರೈಲಿನಲ್ಲಿ ಎಸ್ಕೇಪ್ ಆಗಲು ಯತ್ನಿಸಿದ್ದ ಮೂವರು ಶಂಕಿತ ಆರೋಪಿಗಳನ್ನು ರಾಜಸ್ಥಾನದ ಕೋಟಾ ರೈಲು ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋಮವಾರ ನಡೆದ ಈ ಕಾರ್ಯಾಚರಣೆಯಲ್ಲಿ ಆಂಟಿ-ಗ್ಯಾಂಗ್‌ಸ್ಟರ್ ಟಾಸ್ಕ್ ಫೋರ್ಸ್ ಹಾಗೂ ರಾಜಸ್ಥಾನ ಪೊಲೀಸರು ಜಂಟಿಯಾಗಿ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ.
ಭಾನುವಾರ ಸಂಜೆ ಮುಂಬೈನ ಜುಹು ಪ್ರದೇಶದಲ್ಲಿ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆದಿತ್ತು. ಫುಟ್‌ಬಾಲ್ ಮೈದಾನದಿಂದ ನಟ ಹೊರಡುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಕಾರನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿದ್ದರು. ಘಟನೆಯಲ್ಲಿ ಟೈಗರ್ ಶ್ರಾಫ್ ಸುರಕ್ಷಿತವಾಗಿ ಪಾರಾಗಿದ್ದು, ಅವರ ಕಾರಿನ ಚಾಲಕ ಹಾಗೂ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದರು.
ಗುಂಡಿನ ದಾಳಿ ನಡೆಸಿದ ಬಳಿಕ ಆರೋಪಿಗಳು ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದರು. ಮುಂಬೈ ತೊರೆದರೆ ಪೊಲೀಸರಿಂದ ತಪ್ಪಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಆರೋಪಿಗಳು ರೈಲು ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ, ಅವರ ಪ್ಲಾನ್ ವರ್ಕೌಟ್ ಆಗಿಲ್ಲ. ಆರೋಪಿಗಳ ಚಲನವಲನದ ಸುಳಿವು ಪಡೆದ ಪೊಲೀಸರು ರಾಜಸ್ಥಾನದ ಕೋಟಾ ರೈಲು ನಿಲ್ದಾಣದಲ್ಲಿ ಮೂವರನ್ನೂ ವಶಕ್ಕೆ ಪಡೆದಿದ್ದಾರೆ.
ಬಂಧಿತರಲ್ಲಿ 17 ವರ್ಷದ ಅಪ್ರಾಪ್ತನೂ ಸೇರಿರುವ ಮಾಹಿತಿ ಲಭ್ಯವಾಗಿದ್ದು, ಉಳಿದ ಇಬ್ಬರು 18 ಹಾಗೂ 22 ವರ್ಷ ವಯಸ್ಸಿನವರು ಎಂದು ವರದಿಯಾಗಿದೆ. ಆರೋಪಿಗಳು ಮುಂಬೈನಿಂದ ದೆಹಲಿ ಕಡೆಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿದೆ.
ಇನ್ನು, ಆರೋಪಿಗಳು ಪರಾರಿಯಾಗಲು ಬಳಸಿದ ರೈಲು ಮಾರ್ಗವೂ ತನಿಖೆಯಲ್ಲಿ ಪ್ರಮುಖ ಸುಳಿವಾಗಿದೆ. ದಾಳಿಯ ಬಳಿಕ ವಸಾಯಿ ರೈಲು ನಿಲ್ದಾಣದಿಂದ ರೈಲು ಹತ್ತಿ ಮುಂಬೈ ತೊರೆಯಲು ಮುಂದಾಗಿದ್ದರು. ಆದರೆ, ರೈಲು ರಾಜಸ್ಥಾನದ ಕೋಟಾ ನಿಲ್ದಾಣ ತಲುಪುತ್ತಿದ್ದಂತೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣದ ತನಿಖೆಯನ್ನು ಮುಂಬೈ ಕ್ರೈಂ ಬ್ರಾಂಚ್ ಕೈಗೆತ್ತಿಕೊಂಡಿದ್ದು, ಗುಂಡಿನ ದಾಳಿಯ ಹಿಂದಿನ ಉದ್ದೇಶ ಪತ್ತೆಹಚ್ಚಲು ಮುಂದಾಗಿದೆ. ಟೈಗರ್ ಶ್ರಾಫ್ ಅವರನ್ನೇ ಟಾರ್ಗೆಟ್ ಮಾಡಿದ್ದು ಯಾರು? ದಾಳಿಗೆ ಸುಪಾರಿ ನೀಡಿದ್ದಾರಾ? ಆರೋಪಿಗಳ ಹಿಂದೆ ಯಾವುದಾದರೂ ಗ್ಯಾಂಗ್ ಕೈವಾಡವಿದೆಯಾ? ಎಂಬ ಪ್ರಶ್ನೆಗಳ ಬಗ್ಗೆ ತನಿಖೆ ನಡೆಯುತ್ತಿದೆ.
ಒಟ್ಟಿನಲ್ಲಿ, ಟೈಗರ್ ಶ್ರಾಫ್ ಕಾರಿನ ಮೇಲಿನ ಗುಂಡಿನ ದಾಳಿ ಪ್ರಕರಣದಲ್ಲಿ ಮೂವರು ಶಂಕಿತರನ್ನು ವಶಕ್ಕೆ ಪಡೆಯುವ ಮೂಲಕ ಪೊಲೀಸರಿಗೆ ಮಹತ್ವದ ಮುನ್ನಡೆ ಸಿಕ್ಕಿದೆ. ಆದರೆ, ದಾಳಿಯ ಹಿಂದಿನ ಅಸಲಿ ಕಾರಣ ಹಾಗೂ ಆರೋಪಿಗಳಿಗೆ ಸೂಚನೆ ನೀಡಿದವರು ಯಾರು ಎಂಬುದು ತನಿಖೆಯಿಂದ ಬಹಿರಂಗವಾಗಬೇಕಿದೆ.



