HomeEntertainmentಕಸದ ತೊಟ್ಟಿಯಲ್ಲಿ ಗನ್, ಕ್ಯೂಆರ್ ಕೋಡ್ʼನಲ್ಲಿ ಹಣ: ಬಾಲಿವುಡ್ ನಟನ ಕಾರಿನ ಮೇಲೆ ಗುಂಡಿನ ದಾಳಿ...

ಕಸದ ತೊಟ್ಟಿಯಲ್ಲಿ ಗನ್, ಕ್ಯೂಆರ್ ಕೋಡ್ʼನಲ್ಲಿ ಹಣ: ಬಾಲಿವುಡ್ ನಟನ ಕಾರಿನ ಮೇಲೆ ಗುಂಡಿನ ದಾಳಿ ಹಿಂದಿತ್ತು ಬಿಗ್ ಪ್ಲ್ಯಾನ್!

For Dai;y Updates Join Our whatsapp Group

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಮಹತ್ವದ ಮಾಹಿತಿಗಳು ಹೊರಬರುತ್ತಿವೆ. ಕೇವಲ 34 ಸಾವಿರ ರೂಪಾಯಿ ಹಣ ಹಾಗೂ ವಿದೇಶದಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಆರೋಪಿಗಳಿಗೆ ಗುಂಡಿನ ದಾಳಿ ನಡೆಸುವಂತೆ ಸುಪಾರಿ ನೀಡಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಈ ಪ್ರಕರಣದಲ್ಲಿ ಬಿಷ್ಣೋಯ್ ಗ್ಯಾಂಗ್‌ನ ಅನಿಲ್ ಪಂಡಿತ್ ಹೆಸರು ಕೇಳಿಬಂದಿದ್ದು, ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಅಕ್ಟೋಬರ್ 18ರಂದು ಮುಂಬೈನ ಜುಹು ಪ್ರದೇಶದಲ್ಲಿ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆದಿತ್ತು. ಘಟನೆಯಲ್ಲಿ ನಟ ಪ್ರಾಣಾಪಾಯದಿಂದ ಪಾರಾಗಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ರಾಜಸ್ಥಾನದ ಕೋಟಾದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಆರೋಪಿಗಳಿಗೆ ಹಣಕಾಸಿನ ನೆರವು ನೀಡಿರುವುದು ಹಾಗೂ ದಾಳಿ ನಡೆಸಲು ವಿದೇಶದಲ್ಲಿ ಉದ್ಯೋಗದ ಆಮಿಷವೊಡ್ಡಿರುವ ಕುರಿತು ಮಾಹಿತಿ ದೊರೆತಿದೆ.

ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿರುವ ಅನಿಲ್ ಪಂಡಿತ್, ಆರೋಪಿಗಳಿಗೆ 34 ಸಾವಿರ ರೂಪಾಯಿ ಹಣ ಹಾಗೂ ವಿದೇಶದಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದ ಎಂಬ ಆರೋಪ ಕೇಳಿಬಂದಿದೆ. ದಾಳಿಗೂ ಮುನ್ನ ಆರೋಪಿಗಳು ಮುಂಬೈನಲ್ಲಿದ್ದ ಸಂದರ್ಭದಲ್ಲಿ ಅವರ ಖರ್ಚಿಗಾಗಿ ಪ್ರತಿದಿನ 5 ಸಾವಿರದಿಂದ 10 ಸಾವಿರ ರೂಪಾಯಿವರೆಗೆ ಆನ್‌ಲೈನ್ ಮೂಲಕ ಹಣ ಕಳುಹಿಸಲಾಗುತ್ತಿತ್ತು ಎಂಬ ವಿವರಗಳು ತನಿಖೆಯಲ್ಲಿ ಪ್ರಸ್ತಾಪವಾಗಿವೆ.

ಇನ್ನು ಗುಂಡಿನ ದಾಳಿ ನಡೆಸಿದ ಬಳಿಕ ಆರೋಪಿಗಳು ಮುಂಬೈನಿಂದ ಪರಾರಿಯಾಗಿದ್ದರು. ಅಂಧೇರಿ ರೈಲು ನಿಲ್ದಾಣದಿಂದ ಲೋಕಲ್ ರೈಲಿನಲ್ಲಿ ಪ್ರಯಾಣಿಸಿ, ಬಳಿಕ ಆನ್‌ಲೈನ್ ಟ್ಯಾಕ್ಸಿ ಮೂಲಕ ಸೂರತ್ ತಲುಪಿದ್ದರು. ಅಲ್ಲಿಂದ ಪುಣೆ–ಜೈಪುರ ರೈಲಿನಲ್ಲಿ ಪ್ರಯಾಣ ಮುಂದುವರಿಸಿದ್ದರು. ಪೊಲೀಸರ ಕಣ್ತಪ್ಪಿಸಲು ಪ್ರಯಾಣದ ಮಧ್ಯೆಯೇ ಕೂದಲು ಕತ್ತರಿಸಿಕೊಂಡು, ಬಟ್ಟೆಗಳನ್ನು ಬದಲಾಯಿಸಿಕೊಂಡಿದ್ದರು. ಆದರೆ ರಾಜಸ್ಥಾನದ ಕೋಟಾದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ರೇಹನ್, ಫೂಲ್ ಸಿಂಗ್ ಹಾಗೂ ಹೃತಿಕ್ ಕುಮಾರ್ ಎಂದು ಗುರುತಿಸಲಾಗಿದೆ. ಇವರಲ್ಲಿ ಒಬ್ಬ ಅಪ್ರಾಪ್ತ ವಯಸ್ಕನಾಗಿರುವುದಾಗಿ ವರದಿಯಾಗಿದೆ. ಆರೋಪಿಗಳು ನೇಪಾಳಕ್ಕೆ ಪರಾರಿಯಾಗಲು ಯೋಜನೆ ರೂಪಿಸಿದ್ದರು ಎಂಬ ಮಾಹಿತಿಯೂ ತನಿಖೆಯಲ್ಲಿ ಹೊರಬಂದಿದೆ.

ಪ್ರಕರಣದಲ್ಲಿ ಶಸ್ತ್ರಾಸ್ತ್ರಗಳನ್ನು ಪೂರೈಸಿದವರು ಯಾರು, ದಾಳಿಗೆ ಸೂಚನೆ ನೀಡಿದವರ ಪಾತ್ರವೇನು ಹಾಗೂ ಆರೋಪಿಗಳಿಗೆ ಇತರ ಅಪರಾಧ ಪ್ರಕರಣಗಳೊಂದಿಗೆ ಸಂಪರ್ಕವಿದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಬಂಧನದ ವೇಳೆ ಆರೋಪಿಗಳ ಬಳಿ ಯಾವುದೇ ಆಯುಧಗಳು ಪತ್ತೆಯಾಗಿಲ್ಲ ಎಂಬ ಮಾಹಿತಿ ಇದ್ದು, ದಾಳಿಗೆ ಬಳಸಿದ ಶಸ್ತ್ರಾಸ್ತ್ರಗಳ ಪತ್ತೆ ಕಾರ್ಯವೂ ಮಹತ್ವ ಪಡೆದುಕೊಂಡಿದೆ.

ಮತ್ತೊಂದೆಡೆ, ಗುಂಡಿನ ದಾಳಿಯ ಹೊಣೆಯನ್ನು ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಗುರುತಿಸಿಕೊಂಡಿರುವ ಅನಿಲ್ ಪಂಡಿತ್ ಸಾಮಾಜಿಕ ಜಾಲತಾಣದ ಮೂಲಕ ಹೊತ್ತುಕೊಂಡಿದ್ದಾನೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಅವರೊಂದಿಗೆ ಕೆಲಸ ಮಾಡುವವರಿಗೆ ಬೆದರಿಕೆ ಹಾಕಿರುವ ಆಡಿಯೊ ಸಂದೇಶವೂ ಹೊರಬಂದಿದ್ದು, ಅದರ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಒಟ್ಟಿನಲ್ಲಿ ಟೈಗರ್ ಶ್ರಾಫ್ ಕಾರಿನ ಮೇಲಿನ ಗುಂಡಿನ ದಾಳಿ ಪ್ರಕರಣ ಬಾಲಿವುಡ್‌ನಲ್ಲಿ ಆತಂಕ ಸೃಷ್ಟಿಸಿದ್ದು, ಬಂಧಿತ ಆರೋಪಿಗಳ ವಿಚಾರಣೆಯಿಂದ ಮತ್ತಷ್ಟು ಮಾಹಿತಿ ಹೊರಬರುವ ನಿರೀಕ್ಷೆಯಿದೆ. ದಾಳಿಯ ಹಿಂದಿನ ನಿಖರ ಉದ್ದೇಶ, ಹಣಕಾಸಿನ ವ್ಯವಹಾರ ಹಾಗೂ ಬಿಷ್ಣೋಯ್ ಗ್ಯಾಂಗ್‌ನ ಸಂಪರ್ಕದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img