ತಿರುಪತಿ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಪವಿತ್ರ ತಿರುಮಲ ಬೆಟ್ಟದಲ್ಲಿ ನಿರಂತರವಾಗಿ ಭಾರೀ ಮಳೆಯಾಗುತ್ತಿದೆ.
ದಟ್ಟವಾದ ಮೋಡ ಮತ್ತು ಮಂಜು ಬೆಟ್ಟವನ್ನು ಆವರಿಸಿದ್ದು, ಭಕ್ತರ ಸಂಚಾರಕ್ಕೆ ತೊಂದರೆಯಾಗಿದೆ. ಪ್ರತಿಕೂಲ ಹವಾಮಾನದ ನಡುವೆಯೂ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ತಿರುಮಲೆಯಲ್ಲಿ ರಸ್ತೆಗಳು ಜಲಾವೃತ:
ಮಧ್ಯರಾತ್ರಿಯಿಂದ ಮಳೆಯ ತೀವ್ರತೆ ಹೆಚ್ಚಾಗಿದ್ದು, ಶ್ರೀವಾರಿ ದೇವಸ್ಥಾನದ ಆವರಣ, ಪ್ರಮುಖ ರಸ್ತೆಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಂತಿದೆ ಎಂದು ವರದಿಯಾಗಿದೆ. ಮಳೆಯ ನಡುವೆಯೇ ಭಕ್ತರು ನೀರು ತುಂಬಿದ ರಸ್ತೆಗಳಲ್ಲಿ ಸಂಚರಿಸಿ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ.
ದರ್ಶನ ಮುಗಿಸಿ ಹೊರಬರುವ ಭಕ್ತರಿಗೆ ವಸತಿ ಕೊಠಡಿಗಳು ಹಾಗೂ ಲಡ್ಡು ವಿತರಣಾ ಕೇಂದ್ರಗಳಿಗೆ ತೆರಳಲು ತೊಂದರೆಯಾಗುತ್ತಿದೆ. ಮಳೆಯಿಂದ ರಕ್ಷಿಸಿಕೊಳ್ಳಲು ಹಲವರು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ವತಿಯಿಂದ ನಿರ್ಮಿಸಿರುವ ಶೆಡ್ಗಳ ಕೆಳಗೆ ಆಶ್ರಯ ಪಡೆಯುತ್ತಿದ್ದಾರೆ.
ಘಾಟ್ ರಸ್ತೆಯಲ್ಲಿ ವಾಹನ ಸವಾರರಿಗೆ ಎಚ್ಚರಿಕೆ:
ತಿರುಮಲ ಬೆಟ್ಟದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಘಾಟ್ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಮಳೆ ಮತ್ತು ಮಂಜಿನಿಂದಾಗಿ ರಸ್ತೆಗಳಲ್ಲಿ ಗೋಚರತೆ ಕಡಿಮೆಯಾಗುವ ಸಾಧ್ಯತೆಯಿದ್ದು, ವಾಹನ ಚಾಲಕರು ನಿಧಾನವಾಗಿ ಚಲಿಸಬೇಕು. ವಾಹನಗಳ ನಡುವೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆಯೂ ಸೂಚಿಸಲಾಗಿದೆ.
ಪ್ರಯಾಣಕ್ಕೂ ಮುನ್ನ ಮಾಹಿತಿ ಪರಿಶೀಲಿಸಿ:
ತಿರುಮಲಕ್ಕೆ ತೆರಳುವ ಭಕ್ತರು ಹವಾಮಾನ ಮುನ್ಸೂಚನೆ ಹಾಗೂ ಟಿಟಿಡಿಯ ಅಧಿಕೃತ ಸೂಚನೆಗಳನ್ನು ಗಮನಿಸುವುದು ಅಗತ್ಯ. ಮಳೆಯಿಂದಾಗಿ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆಯಿರುವುದರಿಂದ ಪ್ರಯಾಣ ಆರಂಭಿಸುವ ಮುನ್ನ ಘಾಟ್ ರಸ್ತೆಯ ಪರಿಸ್ಥಿತಿ ಮತ್ತು ದರ್ಶನಕ್ಕೆ ಸಂಬಂಧಿಸಿದ ಅಧಿಕೃತ ಮಾಹಿತಿಯನ್ನು ಪರಿಶೀಲಿಸುವುದು ಸೂಕ್ತವಾಗಿದೆ.










