ಬೀದರ್: ಕೆರೆಯ ಕಡೆಯಿಂದ ಜನವಸತಿ ಪ್ರದೇಶಕ್ಕೆ ಬೃಹತ್ ಮೊಸಳೆಯೊಂದು ನುಗ್ಗಿದ ಘಟನೆ ಬೀದರ್ ತಾಲೂಕಿನ ಜನವಾಡ ಗ್ರಾಮದಲ್ಲಿ ನಡೆದಿದೆ.
ಸುಮಾರು 8 ಅಡಿ ಉದ್ದದ ಮೊಸಳೆಯನ್ನು ಕಂಡು ಗ್ರಾಮಸ್ಥರು ಆತಂಕಗೊಂಡಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅದನ್ನು ಸೆರೆಹಿಡಿದಿದ್ದಾರೆ.
ಜನವಾಡ ಗ್ರಾಮದ ಕೆರೆಯಿಂದ ಮೊಸಳೆ ಜನವಸತಿ ಪ್ರದೇಶದತ್ತ ಬಂದಿದ್ದು, ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ. ಬೃಹತ್ ಗಾತ್ರದ ಮೊಸಳೆಯನ್ನು ಕಂಡು ಜನರು ಭಯಭೀತರಾಗಿದ್ದಾರೆ. ಈ ಮೊಸಳೆ ಸುಮಾರು ಎರಡು ಕ್ವಿಂಟಾಲ್ ತೂಕ ಮತ್ತು 8 ಅಡಿ ಉದ್ದವಿದೆ ಎಂದು ತಿಳಿದುಬಂದಿದೆ.
ಇದಲ್ಲದೆ, ಜನವಾಡ ಕೆರೆಯಲ್ಲಿ ಇನ್ನೂ ಮೊಸಳೆಗಳು ಇರುವ ಸಾಧ್ಯತೆಯ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೊಸಳೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಗ್ರಾಮಸ್ಥರೂ ಅಧಿಕಾರಿಗಳಿಗೆ ಸಹಕಾರ ನೀಡಿದ್ದಾರೆ.
ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ಇರುವಂತೆ ಅರಣ್ಯಾಧಿಕಾರಿಗಳು ಗ್ರಾಮಸ್ಥರಿಗೆ ಸೂಚಿಸಿದ್ದಾರೆ. ಕೆರೆಯ ಬಳಿ ತೆರಳುವಾಗ ಹಾಗೂ ಜನವಸತಿ ಪ್ರದೇಶಗಳ ಸುತ್ತಮುತ್ತ ಸಂಚರಿಸುವಾಗ ಜಾಗರೂಕತೆ ವಹಿಸುವಂತೆ ಸಲಹೆ ನೀಡಿದ್ದಾರೆ.










