ಮೀರತ್: ದೇಶಾದ್ಯಂತ ಚರ್ಚೆಗೆ ಕಾರಣವಾಗಿದ್ದ ಮೀರತ್ನ ‘ಬ್ಲೂ ಡ್ರಮ್’ ಕೊಲೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ಮುಸ್ಕಾನ್ ರಸ್ತೋಗಿ ಅವರ 10 ತಿಂಗಳ ಹೆಣ್ಣು ಮಗುವನ್ನು ದತ್ತು ಪಡೆಯಲು ಮುಂಬೈ ಮೂಲದ ಸಾಮಾಜಿಕ ಜಾಲತಾಣದ ಇನ್ಫ್ಲುಯೆನ್ಸರ್ ಫೈಜಾನ್ ಅನ್ಸಾರಿ ಮುಂದಾಗಿದ್ದಾರೆ. ಮಗುವಿನ ಭವಿಷ್ಯ ಹಾಗೂ ಆರೈಕೆಯ ಜವಾಬ್ದಾರಿ ವಹಿಸಿಕೊಳ್ಳಲು ಅವಕಾಶ ನೀಡುವಂತೆ ಕೋರಿ ಅವರು ಮೀರತ್ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಮುಸ್ಕಾನ್ ರಸ್ತೋಗಿ ಜೈಲಿನಲ್ಲಿದ್ದಾಗ ಜನಿಸಿದ ಹೆಣ್ಣು ಮಗು ರಾಧಾ ಸದ್ಯ ತಾಯಿಯೊಂದಿಗೆ ಕಾರಾಗೃಹದಲ್ಲೇ ವಾಸಿಸುತ್ತಿದೆ. ಮಗುವಿಗೆ ಉತ್ತಮ ಶಿಕ್ಷಣ, ಸುರಕ್ಷಿತ ವಾತಾವರಣ ಹಾಗೂ ಸುಸ್ಥಿರ ಭವಿಷ್ಯ ಕಲ್ಪಿಸುವ ಉದ್ದೇಶದಿಂದ ದತ್ತು ಪಡೆಯಲು ನಿರ್ಧರಿಸಿರುವುದಾಗಿ ಫೈಜಾನ್ ಅನ್ಸಾರಿ ತಿಳಿಸಿದ್ದಾರೆ.
ಮಗುವಿನ ತಾಯಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವುದರಿಂದ ಅದರ ಪರಿಣಾಮ ಪುಟ್ಟ ಕಂದಮ್ಮನ ಭವಿಷ್ಯದ ಮೇಲೆ ಬೀಳಬಾರದು ಎಂಬುದು ತಮ್ಮ ಆಶಯವಾಗಿದೆ. ರಾಧಾಳನ್ನು ಜವಾಬ್ದಾರಿಯುತವಾಗಿ ಬೆಳೆಸಿ ಉತ್ತಮ ಜೀವನ ರೂಪಿಸಿಕೊಡಲು ಬಯಸಿರುವುದಾಗಿ ಅವರು ಹೇಳಿದ್ದಾರೆ.
ಮುಸ್ಕಾನ್ಗೆ ವಿಧಿಸಲಾಗಿರುವ ಶಿಕ್ಷೆಯಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶ ತಮಗಿಲ್ಲ. ನ್ಯಾಯಾಲಯದ ಕಾನೂನು ಪ್ರಕ್ರಿಯೆಗೆ ಅಡ್ಡಿಪಡಿಸುವ ಪ್ರಯತ್ನವನ್ನೂ ಮಾಡುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡೆಯುವುದಕ್ಕಾಗಿ ಈ ನಿರ್ಧಾರ ಕೈಗೊಂಡಿಲ್ಲ ಎಂದು ಫೈಜಾನ್ ಅನ್ಸಾರಿ ಸ್ಪಷ್ಟಪಡಿಸಿದ್ದಾರೆ.
ಮಗುವಿನ ಭವಿಷ್ಯದ ಬಗ್ಗೆ ಇರುವ ಕಾಳಜಿಯಿಂದಲೇ ದತ್ತು ಪಡೆಯಲು ಮುಂದಾಗಿದ್ದು, ಅದಕ್ಕೆ ಅಗತ್ಯವಿರುವ ಆರ್ಥಿಕ ಸಾಮರ್ಥ್ಯದ ವಿವರಗಳನ್ನೂ ಅರ್ಜಿಯೊಂದಿಗೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಆದರೆ ಮಗುವಿನ ದತ್ತು ಪ್ರಕ್ರಿಯೆಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಇನ್ನೂ ಅಂತಿಮ ನಿರ್ಧಾರ ಹೊರಬಿದ್ದಿಲ್ಲ.
ಮೀರತ್ನ ‘ಬ್ಲೂ ಡ್ರಮ್’ ಕೊಲೆ ಪ್ರಕರಣದಲ್ಲಿ ಪತಿ ಸೌರಭ್ ರಜಪೂತ್ ಹತ್ಯೆಗೆ ಸಂಬಂಧಿಸಿದಂತೆ ಮುಸ್ಕಾನ್ ರಸ್ತೋಗಿ ಹಾಗೂ ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಅವರಿಗೆ ಅಕ್ಟೋಬರ್ 14ರಂದು ಮರಣದಂಡನೆ ವಿಧಿಸಲಾಗಿದೆ ಎಂದು ವರದಿಯಾಗಿದೆ. ಈ ಬೆಳವಣಿಗೆಯ ಬಳಿಕ ಮುಸ್ಕಾನ್ ಅವರ ಪುಟ್ಟ ಮಗುವಿನ ಭವಿಷ್ಯ ಹಾಗೂ ಆರೈಕೆಯ ಕುರಿತು ಚರ್ಚೆ ಆರಂಭವಾಗಿದೆ.
2025ರ ನವೆಂಬರ್ 24ರಂದು ಮೀರತ್ನ ವೈದ್ಯಕೀಯ ಕಾಲೇಜಿನಲ್ಲಿ ಮುಸ್ಕಾನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ಬಳಿಕ ತಾಯಿ ಮತ್ತು ಮಗುವನ್ನು ಮತ್ತೆ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯಲಾಗಿತ್ತು. ಅಂದಿನಿಂದ ರಾಧಾ ತನ್ನ ತಾಯಿಯೊಂದಿಗೆ ಜೈಲಿನಲ್ಲೇ ವಾಸಿಸುತ್ತಿದ್ದಾಳೆ.
ಜೈಲು ನಿಯಮಗಳ ಪ್ರಕಾರ, ಆರು ವರ್ಷ ವಯಸ್ಸಿನವರೆಗೆ ಮಕ್ಕಳು ತಮ್ಮ ಬಂಧಿತ ತಾಯಿಯೊಂದಿಗೆ ಕಾರಾಗೃಹದಲ್ಲಿ ವಾಸಿಸಲು ಅವಕಾಶವಿದೆ. ಹೀಗಾಗಿ ಸದ್ಯಕ್ಕೆ ರಾಧಾಳ ವಾಸದ ವ್ಯವಸ್ಥೆಯಲ್ಲಿ ತಕ್ಷಣ ಯಾವುದೇ ಬದಲಾವಣೆ ಆಗುವ ಸಾಧ್ಯತೆ ಇಲ್ಲ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಮುಸ್ಕಾನ್ಗೆ ಪಿಹು ಎಂಬ ಏಳು ವರ್ಷದ ಮತ್ತೊಬ್ಬ ಪುತ್ರಿಯೂ ಇದ್ದಾಳೆ ಎಂದು ವರದಿಯಾಗಿದೆ. ಪಿಹು ಸದ್ಯ ಮುಸ್ಕಾನ್ ಅವರ ಪೋಷಕರೊಂದಿಗೆ ವಾಸಿಸುತ್ತಿದ್ದಾಳೆ ಎನ್ನಲಾಗಿದೆ.
ಮತ್ತೊಂದೆಡೆ, ಮಗುವನ್ನು ದತ್ತು ಪಡೆಯಲು ಆಸಕ್ತಿ ವ್ಯಕ್ತಪಡಿಸಿದ ಮಾತ್ರಕ್ಕೆ ದತ್ತು ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ. ಮಗುವಿನ ಕಾನೂನುಬದ್ಧ ಸ್ಥಿತಿ, ಪೋಷಕರ ಒಪ್ಪಿಗೆ ಅಥವಾ ಸಂಬಂಧಪಟ್ಟ ಕಾನೂನು ಪ್ರಾಧಿಕಾರದ ಅನುಮತಿ ಹಾಗೂ ದತ್ತು ಪಡೆಯಲು ಮುಂದಾಗಿರುವ ವ್ಯಕ್ತಿಯ ಅರ್ಹತೆ ಸೇರಿದಂತೆ ಹಲವು ಅಂಶಗಳನ್ನು ಪರಿಶೀಲಿಸಬೇಕಾಗುತ್ತದೆ.










