ಬೆಂಗಳೂರು ಗ್ರಾಮಾಂತರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ವ್ಹೀಲಿಂಗ್ ಮಾಡುವ ಬೈಕ್ ಸವಾರರ ಹಾವಳಿ ಹೆಚ್ಚಾಗಿದೆ.
ಬೆಂಗಳೂರಿನ ವಿವಿಧ ಪ್ರದೇಶಗಳಿಂದ ದೇವನಹಳ್ಳಿ ಭಾಗಕ್ಕೆ ಬರುತ್ತಿರುವ ಕೆಲವರು, ಐಶಾರಾಮಿ ಬೈಕ್ಗಳಲ್ಲಿ ಹೆದ್ದಾರಿಯಲ್ಲೇ ಅಪಾಯಕಾರಿ ಸ್ಟಂಟ್ಗಳನ್ನು ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ವಿಶೇಷವಾಗಿ ಸಿಲಿಕಾನ್ ಸಿಟಿಯ ಟೆಕ್ಕಿಗಳು ಎನ್ನಲಾದ ಕೆಲ ಬೈಕ್ ಸವಾರರು, ಸಂಚಾರ ಪೊಲೀಸರ ಕಣ್ಣುತಪ್ಪಿಸಿ ಹೆದ್ದಾರಿಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಸಾರ್ವಜನಿಕರ ಸುರಕ್ಷತೆಯನ್ನು ಲೆಕ್ಕಿಸದೆ ಬೈಕ್ಗಳನ್ನು ಒಂದು ಚಕ್ರದಲ್ಲಿ ಚಲಾಯಿಸುವ ಮೂಲಕ ಅಪಾಯಕಾರಿ ಸಾಹಸ ಪ್ರದರ್ಶಿಸುತ್ತಿದ್ದಾರೆ.
ಸ್ಟಂಟ್ಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್:
ಹೆದ್ದಾರಿಯಲ್ಲಿ ವ್ಹೀಲಿಂಗ್ ಮಾಡುವ ದೃಶ್ಯಗಳನ್ನು ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇಂತಹ ಅಪಾಯಕಾರಿ ಸಾಹಸಗಳು ಇತರರಿಗೂ ಪ್ರೇರಣೆ ನೀಡುವ ಸಾಧ್ಯತೆ ಇರುವುದರಿಂದ, ಹೆದ್ದಾರಿಯಲ್ಲಿ ವ್ಹೀಲಿಂಗ್ ಹಾವಳಿಗೆ ಕಡಿವಾಣ ಹಾಕಬೇಕೆಂಬ ಆಗ್ರಹ ಕೇಳಿಬಂದಿದೆ.
ದೇವನಹಳ್ಳಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆಗಳು ನಡೆಯುತ್ತಿದ್ದು, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ವ್ಯಕ್ತವಾಗಿದೆ.








