ಬೀಜಿಂಗ್: ಚೀನಾದ ಟಿಬೆಟ್ ಪ್ರದೇಶದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ ಪ್ರಬಲ ಭೂಕಂಪ ಭಾರಿ ಅನಾಹುತಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ. ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ದಾಖಲಾಗಿರುವ ಈ ಭೂಕಂಪದಲ್ಲಿ ಕನಿಷ್ಠ 18 ಮಂದಿ ಮೃತಪಟ್ಟಿದ್ದು, 46 ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಭೂಕಂಪದ ರಭಸಕ್ಕೆ ನೂರಾರು ಮನೆಗಳು ಹಾಗೂ ಕಟ್ಟಡಗಳು ಕುಸಿದುಬಿದ್ದಿದ್ದು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆ (USGS) ನೀಡಿರುವ ಮಾಹಿತಿ ಪ್ರಕಾರ, ಗುರುವಾರ ರಾತ್ರಿ ಸ್ಥಳೀಯ ಕಾಲಮಾನ 10.33ರ ಸುಮಾರಿಗೆ ಭೂಮಿ ಕಂಪಿಸಿದೆ. ಭೂಕಂಪದ ಕೇಂದ್ರಬಿಂದು ಟಿಬೆಟ್ನ ನಾಗ್ಕ್ವು ನಗರದಿಂದ ಪೂರ್ವ-ಈಶಾನ್ಯಕ್ಕೆ ಸುಮಾರು 190 ಕಿಲೋಮೀಟರ್ ಹಾಗೂ ರಾಜಧಾನಿ ಲಾಸಾದಿಂದ ಈಶಾನ್ಯಕ್ಕೆ ಸುಮಾರು 390 ಕಿಲೋಮೀಟರ್ ದೂರದ ಪರ್ವತ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಭೂಕಂಪದ ತೀವ್ರತೆಗೆ ಹಲವು ಪ್ರದೇಶಗಳಲ್ಲಿ ಭಾರಿ ಹಾನಿ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಸುಮಾರು 339 ಮನೆಗಳು ಸಂಪೂರ್ಣವಾಗಿ ಅಥವಾ ಭಾಗಶಃ ಕುಸಿದುಬಿದ್ದಿವೆ. ಗಾಯಗೊಂಡಿರುವ 46 ಮಂದಿಯಲ್ಲಿ 11 ಜನರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು, ಅವರನ್ನು ತುರ್ತು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಇನ್ನು ತಡರಾತ್ರಿ ಏಕಾಏಕಿ ಭೂಮಿ ಕಂಪಿಸಿದ ಪರಿಣಾಮ ಜನರು ಭಯಭೀತರಾಗಿ ಮನೆಗಳು, ಅಂಗಡಿಗಳು ಹಾಗೂ ರೆಸ್ಟೋರೆಂಟ್ಗಳಿಂದ ಹೊರಗೆ ಓಡಿಬಂದಿದ್ದಾರೆ. ಭೂಕಂಪದ ರಭಸಕ್ಕೆ ಸೂಪರ್ಮಾರ್ಕೆಟ್ಗಳ ಕಪಾಟುಗಳಿಂದ ವಸ್ತುಗಳು ಕೆಳಗೆ ಬೀಳುತ್ತಿರುವ ಹಾಗೂ ವಿದ್ಯುತ್ ಕಂಬಗಳು ಅಲುಗಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಭೂಕಂಪದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ವರದಿಯಾಗಿದೆ. ಅವಶೇಷಗಳಡಿ ಸಿಲುಕಿರುವವರನ್ನು ಪತ್ತೆಹಚ್ಚಲು ಹಾಗೂ ಗಾಯಾಳುಗಳನ್ನು ರಕ್ಷಿಸಲು 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದೆ. ಕುಸಿದ ಕಟ್ಟಡಗಳ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರಿದಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ.
ಮತ್ತೊಂದೆಡೆ, ಟಿಬೆಟ್ನಲ್ಲಿ ಸಂಭವಿಸಿದ ಭೂಕಂಪದ ಬೆನ್ನಲ್ಲೇ ಭಾರತದ ಗಡಿ ಸಮೀಪದ ಚೀನಾ ಪ್ರದೇಶದಲ್ಲಿಯೂ ಮತ್ತೊಂದು ಭೂಕಂಪ ದಾಖಲಾಗಿದೆ. ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ (NCS) ಮಾಹಿತಿ ಪ್ರಕಾರ, ಭಾರತೀಯ ಕಾಲಮಾನ ರಾತ್ರಿ ಸುಮಾರು 8.29ಕ್ಕೆ ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರ ಕೇಂದ್ರಬಿಂದು ಅರುಣಾಚಲ ಪ್ರದೇಶದ ಪ್ಯಾಂಗಿನ್ನಿಂದ ವಾಯುವ್ಯಕ್ಕೆ ಸುಮಾರು 505 ಕಿಲೋಮೀಟರ್ ದೂರದಲ್ಲಿದ್ದು, ಭೂಮಿಯ 15 ಕಿಲೋಮೀಟರ್ ಆಳದಲ್ಲಿ ಕಂಪನ ದಾಖಲಾಗಿದೆ.









