ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ಗೌಡ ನಡುವಿನ ಪರೋಕ್ಷ ಸಮರ ಈಗ ಮತ್ತೊಂದು ಹಂತಕ್ಕೆ ತಲುಪಿದೆ. ಇಷ್ಟು ದಿನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳ ಮೂಲಕ ನಡೆಯುತ್ತಿದ್ದ ಆರೋಪ-ಪ್ರತ್ಯಾರೋಪ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ಗೆ ನಟ ಧನ್ವೀರ್ ಗೌಡ ಫೋನ್ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲ, ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ನಾಗರಾಜ್ ಬೆಂಗಳೂರಿನ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಧನ್ವೀರ್ ನಿಂದಿಸಿದ್ದಾರೆ ಎನ್ನಲಾದ ಆಡಿಯೋ ಸಂಭಾಷಣೆಯನ್ನೂ ಪೊಲೀಸರಿಗೆ ಸಲ್ಲಿಸಿದ್ದಾರೆ.
ದೂರು ಸ್ವೀಕರಿಸಿರುವ ಪೊಲೀಸರು ನಟ ಧನ್ವೀರ್ ಗೌಡ ವಿರುದ್ಧ ಎನ್ಸಿಆರ್ ದಾಖಲಿಸಿಕೊಂಡಿದ್ದಾರೆ. ವಿಚಾರಣೆಗಾಗಿ ಧನ್ವೀರ್ಗೆ ನೋಟಿಸ್ ನೀಡಿ ಠಾಣೆಗೆ ಕರೆಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಇನ್ನು ಈ ವಿವಾದಕ್ಕೆ ಕಾರಣವಾಗಿದ್ದು ಸೋಷಿಯಲ್ ಮೀಡಿಯಾ ಪೋಸ್ಟ್ ವಾರ್. ಕೆಲವರು ದರ್ಶನ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸ್ವಹಿತಾಸಕ್ತಿ ಸಾಧಿಸುತ್ತಿದ್ದಾರೆ ಎಂಬ ಅರ್ಥದಲ್ಲಿ ವಿಜಯಲಕ್ಷ್ಮಿ ಪೋಸ್ಟ್ ಹಂಚಿಕೊಂಡಿದ್ದರು.
ಇದಕ್ಕೆ ತಿರುಗೇಟು ನೀಡುವ ರೀತಿಯಲ್ಲಿ ಧನ್ವೀರ್ ಗೌಡ ಕೂಡ ಪೋಸ್ಟ್ ಮಾಡಿದ್ದರು. ಕೆಲವರು ಶಕುನಿಯಂತೆ ವರ್ತಿಸುತ್ತಾರೆ. ಕೊನೆಯವರೆಗೂ ಆಟವಾಡಿ, ಬಳಿಕ ತಾವೇ ಸಂತ್ರಸ್ತರಂತೆ ನಟಿಸುತ್ತಾರೆ. ಅವರಿಗೆ ಹೆದರಿಸುವ ಅಭ್ಯಾಸ, ನಮಗೆ ಎದುರಿಸುವ ಅಭ್ಯಾಸ ಎಂದು ಬರೆದುಕೊಂಡಿದ್ದರು.
ಈ ಪೋಸ್ಟ್ಗಳ ಬೆನ್ನಲ್ಲೇ ಇಬ್ಬರ ನಡುವಿನ ಪರೋಕ್ಷ ವಾಕ್ಸಮರ ತೀವ್ರಗೊಂಡಿತ್ತು. ಇದೀಗ ಮ್ಯಾನೇಜರ್ ನಾಗರಾಜ್ ನೀಡಿರುವ ದೂರಿನಿಂದ ಪ್ರಕರಣ ಪೊಲೀಸ್ ಠಾಣೆ ತಲುಪಿದೆ.
ಸದ್ಯ ಧನ್ವೀರ್ ವಿರುದ್ಧ ಎನ್ಸಿಆರ್ ದಾಖಲಾಗಿದ್ದು, ದೂರಿನಲ್ಲಿರುವ ಆರೋಪಗಳ ಸತ್ಯಾಸತ್ಯತೆ ಇನ್ನಷ್ಟೇ ಪರಿಶೀಲನೆಯಾಗಬೇಕಿದೆ. ಈ ವಿವಾದಕ್ಕೆ ನಟ ಧನ್ವೀರ್ ಗೌಡ ಯಾವ ರೀತಿಯ ಸ್ಪಷ್ಟನೆ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.









