ಗದಗ:ಗದಗ ಕೆಆರ್ಐಡಿಎಲ್ನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಪರ್ವೇಜ್ ಧಾರವಾಡ ನಾಪತ್ತೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ.
ಸೆಪ್ಟೆಂಬರ್ 13ರಂದು ನಾಪತ್ತೆಯಾಗಿದ್ದ ಪರ್ವೇಜ್, ಸುಮಾರು 40 ದಿನಗಳ ಬಳಿಕ ಮಹಾರಾಷ್ಟ್ರದ ಮುಂಬೈನಲ್ಲಿ ಪತ್ತೆಯಾಗಿದ್ದಾರೆ. ಗದಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದು, ನಾಳೆ ಶನಿವಾರ ಗದಗ ನಗರಕ್ಕೆ ಕರೆತರಲು ಸಿದ್ಧತೆ ನಡೆಸಿದ್ದಾರೆ.
ಪರ್ವೇಜ್ ಪತ್ತೆಗಾಗಿ ಗದಗ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿದ್ದರು. ತನಿಖೆಯ ವೇಳೆ ಮಧ್ಯಪ್ರದೇಶದ ಭೋಪಾಲ್ ರೈಲ್ವೆ ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಅವರು ಕಾಣಿಸಿಕೊಂಡಿರುವ ಸುಳಿವು ಲಭಿಸಿತ್ತು. ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಪೊಲೀಸರು ಹುಡುಕಾಟ ಮುಂದುವರಿಸಿದ್ದರು. ಭೋಪಾಲ್ ಬಳಿಕ ಇದೀಗ ಮುಂಬೈನಲ್ಲಿ ಪತ್ತೆಯಾಗಿರುವುದು ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
ಸುಮಾರು 40 ದಿನಗಳಿಂದ ನಾಪತ್ತೆಯಾಗಿದ್ದ ಅಧಿಕಾರಿಯ ಪತ್ತೆಯಿಂದ ಕುಟುಂಬಸ್ಥರು ಹಾಗೂ ಪೊಲೀಸರಿಗೆ ನೆಮ್ಮದಿ ಸಿಕ್ಕಂತಾಗಿದೆ. ಪರ್ವೇಜ್ ನಾಪತ್ತೆಯಾಗಿದ್ದ ಸಂದರ್ಭದ ಹಿನ್ನೆಲೆ, ಅವರು ಇಷ್ಟು ದಿನ ಎಲ್ಲಿದ್ದರು ಮತ್ತು ಮುಂಬೈಗೆ ತಲುಪಿದ್ದು ಹೇಗೆ ಎಂಬುದು ಮುಂದಿನ ತನಿಖೆಯಿಂದ ತಿಳಿದುಬರಬೇಕಿದೆ.
ಶನಿವಾರ ಅವರನ್ನು ಗದಗಕ್ಕೆ ಕರೆತಂದ ಬಳಿಕ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುವ ನಿರೀಕ್ಷೆಯಿದೆ.










