ಗದಗ: ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಸುರಿದ ಧಾರಾಕಾರ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ಗದಗ ನಗರದ ಗಂಗಿಮಡಿ ಬಡಾವಣೆಯಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ನಿವಾಸಿಗಳು ಪರದಾಡುವಂತಾದರೆ, ತಾಲೂಕಿನ ಚಿಕ್ಕಹಂದಿಗೋಳ ಗ್ರಾಮದ ಹೊರವಲಯದಲ್ಲಿ ಸಿಡಿಲು ಬಡಿದು ಕುರಿಗಾಯಿಯೊಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಐದು ಆಡುಗಳೂ ಸಾವನ್ನಪ್ಪಿದ್ದು, ಮಳೆಯ ಆರ್ಭಟ ಎರಡು ಕಡೆ ಆತಂಕ ಮೂಡಿಸಿದೆ.
ಗಂಗಿಮಡಿಯಲ್ಲಿ ಮನೆಗಳಿಗೆ ನುಗ್ಗಿದ ನೀರು:
ಗದಗ ನಗರದ ಗಂಗಿಮಡಿ ಬಡಾವಣೆಯಲ್ಲಿ ಸಂಜೆ ಸುರಿದ ಧಾರಾಕಾರ ಮಳೆಗೆ ಹಲವು ಮನೆಗಳಿಗೆ ನೀರು ನುಗ್ಗಿದೆ. ಮನೆಗಳ ಒಳಗೆ ನೀರು ಮಡುಗಟ್ಟಿದ್ದರಿಂದ ನಿವಾಸಿಗಳು ನೀರನ್ನು ಹೊರಹಾಕಲು ಹರಸಾಹಸ ಪಡುವಂತಾಯಿತು. ಬಡಾವಣೆಯ ರಸ್ತೆಗಳು ಜಲಾವೃತಗೊಂಡಿದ್ದು, ರಸ್ತೆಯೇ ಕಾಣದಂತಾದ ಪರಿಣಾಮ ವಾಹನ ಸವಾರರು ಪರದಾಡಿದರು. ದಿಢೀರ್ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತು.
ಸಿಡಿಲಿಗೆ ಕುರಿಗಾಯಿ ಬಲಿ:
ಗದಗ ತಾಲೂಕಿನ ಚಿಕ್ಕಹಂದಿಗೋಳ ಗ್ರಾಮದ ಸರಹದ್ದಿನಲ್ಲಿ ಶುಕ್ರವಾರ ಸಂಜೆ ಸಿಡಿಲು ಬಡಿದು ಕುರಿಗಾಯಿ ಮಾಬುಸಾಬ್ ಮೋದಿನ್ಸಾಬ್ ಮುಲ್ಲಾನವರ್ (44) ಮೃತಪಟ್ಟಿದ್ದಾರೆ. ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಅವರೊಂದಿಗೆ ಸಮೀಪದಲ್ಲಿದ್ದ ಇನ್ನಿಬ್ಬರು ಕುರಿಗಾರರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಐದು ಆಡುಗಳೂ ಸಿಡಿಲಿನ ಹೊಡೆತಕ್ಕೆ ಸಾವನ್ನಪ್ಪಿವೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಗದಗ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.










